ಉಡುಪಿ: ದ್ವಿತೀಯ ಪಿ.ಯು.ಸಿ ಪರೀಕ್ಷೆಯು ಮಾರ್ಚ್ 1 ರಿಂದ 22ರ ವರೆಗೆ ನಡೆಯಲಿದ್ದು, ಪರೀಕ್ಷಾ ಕೇಂದ್ರಗಳಲ್ಲಿ ಶಿಸ್ತುಬದ್ಧವಾಗಿ ಪರೀಕ್ಷೆಗಳನ್ನು ನಡೆಸಿ, ಯಾವುದೇ ಗೊಂದಲಗಳಿಗೆ ಆಸ್ಪದ ನೀಡದಂತೆ ಎಚ್ಚರವಹಿಸಬೇಕು ಎಂದು ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಡಾ.ಕೆ.ವಿದ್ಯಾಕುಮಾರಿ ಹೇಳಿದರು.
ಅವರು ಗುರುವಾರ ನಗರದ ಮಣಿಪಾಲ ರಜತಾದ್ರಿಯ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆದ ಪಿ.ಯು.ಸಿ ಪರೀಕ್ಷೆಯ ಪೂರ್ವಭಾವಿ ಸಿದ್ಧತಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು.
ವಿದ್ಯಾರ್ಥಿಗಳು ಪರೀಕ್ಷಾ ತರಗತಿಗಳಲ್ಲಿ ಸುಲಲಿತವಾಗಿ ಪರೀಕ್ಷೆಯನ್ನು ಬರೆಯಲು ಪೂರಕ ವಾತಾವರಣ ಕಲ್ಪಿಸಲು ಅಗತ್ಯ ಪೂರ್ವಸಿದ್ದತೆಗಳನ್ನು ಮಾಡಿಕೊಳ್ಳಬೇಕು. ಪ್ರಶ್ನೆಪತ್ರಿಕೆ ವಿತರಿಸುವ ತಂಡ, ಪರೀಕ್ಷಾ ಕೇಂದ್ರದ ವೀಕ್ಷಕರ ನೇಮಕ, ಪ್ರಶ್ನೆ ಪತ್ರಿಕೆ ಪಾಲಕರ ತಂಡ, ಜಿಲ್ಲಾ ಮಾರ್ಗಾಧಿಕಾರಿಗಳ ತಂಡ, ಪರೀಕ್ಷಾ ಪರಿವೀಕ್ಷಕರ ಸಂಚಾರ ಜಾಗೃತ ದಳ ಮತ್ತಿತರ ತಂಡಗಳನ್ನು ಈಗಾಗಲೇ ನೇಮಿಸಲಾಗುವುದು ಎಂದರು.
ಪರೀಕ್ಷಾ ಕೇಂದ್ರಗಳಿಗೆ ವಿದ್ಯಾರ್ಥಿಗಳು ನಿಗದಿತ ಕಾಲಾವಧಿಯೊಳಗೆ ಹಾಜರಾಗಲು ಅನುಕೂಲವಾಗುವಂತೆ ಸಾರಿಗೆ ವ್ಯವಸ್ಥೆಯನ್ನು ಕೆ.ಎಸ್. ಆರ್.ಟಿ.ಸಿ ಹಾಗೂ ಸಾರಿಗೆ ಇಲಾಖೆಯ ಅಧಿಕಾರಿಗಳು ಕೈಗೊಳ್ಳಬೇಕು. ಗೌಪ್ಯ ವಸ್ತುಗಳನ್ನು ಜಿಲ್ಲಾ ಖಜಾನೆಯಿಂದ ಪಡೆದು ಪರೀಕ್ಷಾ ಕೇಂದ್ರಗಳಿಗೆ ಸಕಾಲದಲ್ಲಿ ವಿತರಿಸಬೇಕು. ಪ್ರಶ್ನೆ ಪತ್ರಿಕೆಯ ಬಂಡಲ್ ಗಳನ್ನು ಬಿಚ್ಚುವಾಗ ಹಾಗೂ ಉತ್ತರ ಪತ್ರಿಕೆಗಳನ್ನು ಸ್ವೀಕರಿಸಿ,ಬಂಡಲ್ ಮಾಡುವಾಗ ಸಿ.ಸಿ.ಟಿ.ವಿ. ವೀಕ್ಷಣೆಯಲ್ಲಿಯೇ ನಿರ್ವಹಿಸಬೇಕೆಂದು ಸೂಚನೆ ನೀಡಿದರು.