ಕುಂದಾಪುರ : ಡಾ| ಬಿ. ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ವ್ಯವಹಾರ ಆಡಳಿತ ವಿಭಾಗದ ಆಯೋಜನೆಯಲ್ಲಿ ಮಾರ್ಚ್ 15ರಂದು ಕಾಲೇಜಿನ ಸಭಾಂಗಣದಲ್ಲಿ ನಡೆದ “ನೋವೆಷನ್” – ಮ್ಯಾನೇಜ್ಮೆಂಟ್ ಫೆಸ್ಟ್ ಅಂತರ್-ತರಗತಿ ಸ್ಪರ್ಧೆಯ ಉದ್ಘಾಟನೆಯನ್ನು ಕಾಲೇಜಿನ ಪ್ರಾಂಶುಪಾಲರಾದ ಪ್ರೊ| ಕೆ. ಉಮೇಶ್ ಶೆಟ್ಟಿಯವರು ನೆರವೇರಿಸಿ, ನೋವೆಷನ್ ಪರ್ಯಾಯ ಪಾರಿತೋಷಕವನ್ನು ಅನಾವರಣಗೈದರು. ಮಾರ್ಚ್ 15 ಮತ್ತು 16ರಂದು ನಡೆಯಲಿರುವ ಈ ಅಂತರ್-ತರಗತಿ ಸ್ಪರ್ಧೆ ಯಶಸ್ವಿಯಾಗಲಿ, ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಹೇಳಿದರು.
ಮುಖ್ಯ ಅತಿಥಿಯಾಗಿ ಆಗಮಿಸಿದ ಮಲಬಾರ್ ಗೋಲ್ಡ್, ಉಡುಪಿ ಇದರ ಗೆಸ್ಟ್ ರಿಲೇಶನ್ ಮ್ಯಾನೇಜರಾದ ಶ್ರೀ ರಾಘವೇಂದ್ರ ನಾಯಕ್ ಮಾತನಾಡಿ, ವಿದ್ಯಾರ್ಥಿಗಳು ಬದಲಾದ ಕಾಲಘಟ್ಟಕ್ಕೆ ಅನುಗುಣವಾಗಿ ತಮ್ಮಲ್ಲಿ ವ್ಯವಹಾರ ಮತ್ತು ನಿರ್ವಹಣಾ ಕೌಶಲ್ಯಗಳನ್ನು ವೃದ್ಧಿಸಿಕೊಳ್ಳಬೇಕು. ಮಾನವೀಯತೆ, ಪ್ರೀತಿ, ಸಹನೆ, ತಾಳ್ಮೆಯಿಂದ ನಾವು ವ್ಯವಹಾರ ಕ್ಷೇತ್ರದಲ್ಲಿ ನಮ್ಮನ್ನು ತೊಡಗಿಸಿಕೊಂಡರೆ ಯಶಸ್ಸು ಗಳಿಸಬಹುದು ಎಂದು ಹೇಳಿದರು.
ಇನ್ನೋರ್ವ ಮುಖ್ಯ ಅತಿಥಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣ ಅಭಿವೃದ್ಧಿ ಯೋಜನೆ, ಬ್ರಹ್ಮಾವರ ಇದರ ಫಂಡ್ ಮ್ಯಾನೇಜರ್, ಕಾಲೇಜಿನ ಪ್ರಾಕ್ತನ ವಿದ್ಯಾರ್ಥಿ ಶ್ರೀ ರಂಜಿತ್ ಕುಮಾರ್ ಎಂ.ಡಿ. ಮಾತನಾಡಿ ತಮ್ಮ ಕಾಲೇಜು ದಿನಗಳ ಅನುಭವವನ್ನು ಸ್ಮರಿಸಿ, ನಾನು ಈ ಸಂಸ್ಥೆಗೆ ಸದಾ ಚಿರಋಣಿ ಎಂದು ಹೇಳಿದರು.
ಕಾಲೇಜಿನ ಉಪಪ್ರಾಂಶುಪಾಲರಾದ ಡಾ| ಚೇತನ್ ಶೆಟ್ಟಿ ಕೋವಾಡಿ ಕಾರ್ಯಕ್ರಮಕ್ಕೆ ಶುಭಹಾರೈಸಿದರು. ವ್ಯವಹಾರ ಆಡಳಿತ ವಿಭಾಗದ ಮುಖ್ಯಸ್ಥರಾದ ಶ್ರೀಮತಿ ನಂದಾ ರೈ ಸ್ವಾಗತಿಸಿ, ಪ್ರಾಸ್ತ್ತಾವಿಸಿದರು. ಕಾರ್ಯಕ್ರಮದ ಸಂಯೋಜಕಿ ಶ್ರೀಮತಿ ಅವಿತಾ ಎಮ್. ಕೊರೆಯಾ ಹಾಗೂ ವಿದ್ಯಾರ್ಥಿ ಪ್ರತಿನಿಧಿ ಪ್ರಜ್ಞಿತಾ ಉಪಸ್ಥಿತರಿದ್ದರು. ವಿದ್ಯಾರ್ಥಿ ಪ್ರತಿನಿಧಿ ಚೇತನ್ ಶೆಟ್ಟಿ ವಂದಿಸಿದರು. ವಿದ್ಯಾರ್ಥಿನಿ ವಿನಿಟಾ ಡಿ. ಅಲ್ಮೇಡಾ ನಿರೂಪಿಸಿದರು.