ಕುಂದಾಪುರ : ಸಂಸ್ಕೃತಿ-ಸಂಸ್ಕಾರಗಳು ಒಂದು ದಿನದ ಆಚರಣೆಗೆ ಸೀಮಿತವಾಗದೆ, ಬದುಕಿನಲ್ಲಿ ಈ ಮೌಲ್ಯಗಳನ್ನು ಅಳವಡಿಸಿಕೊಳ್ಳುವ ಮೂಲಕ ಶ್ರೀಮಂತ ಜೀವನವನ್ನು ಇನ್ನಷ್ಟು ಸಮೃದ್ಧಗೊಳಿಸಿಕೊಳ್ಳಿ ಎಂದು ಶ್ರೀ ಭವಾನಿ ಆಟೋಮೇಟ್ಸ್ ಸಂಸ್ಥಾಪಕ, ಸಮಾಜಸೇವಕ ಶ್ರೀ ಕರುಣಾಕರ ಹೆಗ್ಡೆ ಆನಗಳ್ಳಿ ಹೇಳಿದರು. ಇವರು ಇಲ್ಲಿನ ಡಾ. ಬಿ. ಬಿ. ಹೆಗ್ಡೆ ಕಾಲೇಜಿನ ವಿದ್ಯಾರ್ಥಿ ಕ್ಷೇಮಪಾಲನಾ ಸಮಿತಿ ಆಯೋಜಿಸಿರುವ ಸಾಂಪ್ರದಾಯಿಕ ದಿನವನ್ನು ಉದ್ಘಾಟಿಸಿ ಮಾತನಾಡಿದರು. ಈ ಸಂದರ್ಭ ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ಕೆ. ಉಮೇಶ್ ಶೆಟ್ಟಿ ಅಧ್ಯಕ್ಷತೆ ವಹಿಸಿ, ನಮ್ಮ ಸಂಸ್ಕೃತಿಯನ್ನು ವಿದ್ಯಾರ್ಥಿಗಳಿಗೆ ಪರಿಚಯಿಸುವುದರೊಂದಿಗೆ ಅವುಗಳ ಮೌಲ್ಯವನ್ನು ವಿದ್ಯಾರ್ಥಿಗಳು ಅರಿಯುವಂತಾದಾಗ ಶಿಕ್ಷಣ ಪರಿಪೂರ್ಣವಾಗಲು ಸಾಧ್ಯ ಎಂದರು. ಉಪಪ್ರಾಂಶುಪಾಲ ಡಾ. ಚೇತನ್ ಶೆಟ್ಟಿ ಕೋವಾಡಿ ಸ್ವಾಗತಿಸಿ, ಪ್ರಾಸ್ತಾವಿಸಿದರು. ವಿದ್ಯಾರ್ಥಿ ಕ್ಷೇಮಪಾಲನಾ ಅಧಿಕಾರಿ ಶ್ರೀ ರಕ್ಷಿತ್ ರಾವ್ ಗುಜ್ಜಾಡಿ ಅತಿಥಿಗಳನ್ನು ಪರಿಚಯಿಸಿ, ವಂದಿಸಿದರು. ಕನ್ನಡ ಉಪನ್ಯಾಸಕಿ ಶೀಮತಿ ರೇಷ್ಮಾ ಶೆಟ್ಟಿ ನಿರೂಪಿಸಿದರು. ಈ ಸಂದರ್ಭ ‘ಸಂಸ್ಕೃತಿ’ ಶೀರ್ಷಿಕೆಯಡಿಯಲ್ಲಿ ನಡೆಸಿದ ಫ್ಯಾಶನ್ ಶೋ ಸ್ಪರ್ಧೆಯಲ್ಲಿ ವಿಜೇತರಾದವರನ್ನು ಅಭಿನಂದಿಸಲಾಯಿತು.