ಕುಂದಾಪುರ : ಇಂಗ್ಲೀಷ್ ಸುಂದರವಾದ ಸಂವಹನ ಭಾಷೆ. ನಮ್ಮ ಭಾವನೆಗಳನ್ನು ಸಮರ್ಪಕವಾಗಿ ಇನ್ನೊಬ್ಬರಿಗೆ ತಲುಪಿಸುವ ಭಾಷೆ. ಕೇವಲ ಒಂದು ಪ್ರದೇಶಕ್ಕಷ್ಟೇ ಸೀಮಿತವಾಗದೇ ವಿಶ್ವವ್ಯಾಪಿಯಾಗಿ ಬದುಕುವ ಸಂದರ್ಭದಲ್ಲಿ ಇಂಗ್ಲೀಷ್ ಭಾಷೆ ಅನಿವಾರ್ಯ. ಜಾಗತಿಕ ಭಾಷೆಯಾದ ಇಂಗ್ಲೀಷ್ ಕಲಿತು ಸಂದರ್ಭಕ್ಕೆ ತಕ್ಕಂತೆ ಬಳಸಿ, ಅದರೊಂದಿಗೆ ಮಾತೃಭಾಷೆಯನ್ನು ಪ್ರೀತಿಸಿ ಎಂದು ಭಂಡಾರ್‌ಕಾರ್ಸ್ ಪದವಿ ಪೂರ್ವ ಕಾಲೇಜಿನ ಇಂಗ್ಲೀಷ್ ಉಪನ್ಯಾಸಕ ಶ್ರೀ ಸೂರಜ್ ಭಟ್ ಹೇಳಿದರು. ಇವರು ಡಾ| ಬಿ.ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ಇಂಗ್ಲೀಷ್ ವಿಭಾಗ ಮತ್ತು ಇಂಗ್ಲೀಷ್ ಸಂಘ ಆಯೋಜಿಸಿದ ‘ಇಂಗ್ಲೀಷ್ ಡೇ’ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಕಾಲೇಜಿನ ಪ್ರಾಂಶುಪಾಲರಾದ ಪ್ರೊ| ಕೆ. ಉಮೇಶ್ ಶೆಟ್ಟಿಯವರು ಮಾತನಾಡಿ, ಆಲಿಸುವ ಮತ್ತು ಓದುವ ಮುಖೇನ ಇಂಗ್ಲೀಷ್ ಮಾತನಾಡುವ ಇಚ್ಛಾಶಕ್ತಿ ಇದ್ದಾಗ ಭಾಷೆಯನ್ನು ಸ್ಪಷ್ಟವಾಗಿ ಮಾತನಾಡಲು ಸಾಧ್ಯ. ಭಾಷೆಯ ಬಳಕೆ ನಮ್ಮನ್ನು ಜ್ಞಾನವಂತರನ್ನಾಗಿಸುತ್ತದೆ ಎಂದರು.
ಉಪಪ್ರಾಂಶುಪಾಲರಾದ ಡಾ| ಚೇತನ್ ಶೆಟ್ಟಿ ಕೋವಾಡಿ ಪ್ರಾಸ್ತಾವಿಸಿದರು. ಇಂಗ್ಲೀಷ್ ವಿಭಾಗದ ಮುಖ್ಯಸ್ಥೆ ಶ್ರೀಮತಿ ದೀಪಿಕಾ ಜಿ. ಸ್ವಾಗತಿಸಿದರು. ಇಂಗ್ಲೀಷ್ ಪ್ರಾಧ್ಯಾಪಕರಾದ ರವೀನಾ ಸಿ. ಪೂಜಾರಿ ಉಪಸ್ಥಿತರಿದ್ದರು. ಶ್ರೀ ಸ್ಟಾಲಿನ್ ಡಿ’ಸೋಜಾ ಬಹುಮಾನಿತರ ಪಟ್ಟಿ ವಾಚಿಸಿ, ಶ್ರೀಮತಿ ಸ್ವಾತಿ ರಾವ್ ವಂದಿಸಿದರು. ವಿದ್ಯಾರ್ಥಿಗಳಾದ ಶ್ರೀನಾಭ ಉಪಾಧ್ಯಾಯ ಅತಿಥಿಗಳನ್ನು ಪರಿಚಯಿಸಿ, ಶ್ರೇಯಾ ಖಾರ್ವಿ ಪ್ರಾರ್ಥಿಸಿ, ಶ್ರದ್ಧಾ ಆರ್. ನಿರೂಪಿಸಿದರು.
ಈ ಸಂದರ್ಭ ಇಂಗ್ಲೀಷ್ ದಿನಾಚರಣೆಯ ಪ್ರಯುಕ್ತ ಆಯೋಜಿಸಿದ ವಿನೂತನ ಸ್ಪರ್ಧೆಗಳಾದ ಪುಸ್ತಕ ವಿಮರ್ಶೆಯ ವಿಡಿಯೋ ಚಿತ್ರೀಕರಣ, ಜಾಹೀರಾತು ಮತ್ತು ಬುಕ್ ಮಾರ್ಕ್ಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ನೀಡಲಾಯಿತು.