Home » ಬರೆಯುವುದಕ್ಕೆ ಮುಂದಾಗುವವರ ಕಣ್ಗಳಲ್ಲಿ ಅಸ್ಪೃಶ್ಯತೆ ಇರಬಾರದು
 

ಬರೆಯುವುದಕ್ಕೆ ಮುಂದಾಗುವವರ ಕಣ್ಗಳಲ್ಲಿ ಅಸ್ಪೃಶ್ಯತೆ ಇರಬಾರದು

ಶ್ರೀರಾಜ್ ವಕ್ವಾಡಿ

by Kundapur Xpress
Spread the love

ಕುಂದಾಪುರ: ಡಾ| ಬಿ. ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ಕನ್ನಡ ಸಂಘ ಆಯೋಜಿಸಿದ್ದ ‘ಬರವಣಿಗೆ ಕೌಶಲ’ ವಿಶೇಷ ಉಪನ್ಯಾಸ ಕಾರ್ಯಕ್ರಮವು ನಡೆಯಿತು. ಲೇಖಕ, ಪತ್ರಕರ್ತ ಶ್ರೀರಾಜ್ ವಕ್ವಾಡಿ ಮಾತನಾಡಿ, “ಎಲ್ಲಿ ಅವ್ಯಕ್ತವನ್ನು ಹೇಳುವಲ್ಲಿ ಸಾಹಿತಿಯೊಬ್ಬ ಸೋಲುತ್ತಾನೋ, ಅಲ್ಲಿ ಉಳಿದದ್ದೆಲ್ಲವೂ ಸೋತಂತೆ. ಇಲ್ಲಿ ಅವ್ಯಕ್ತವಾಗಿರುವ ಧ್ವನಿಗೆ ಹಿಂದಿನ ಎಲುಬಾಗಿ ಸಾಹಿತ್ಯ ಮಾಧ್ಯಮ ಕೆಲಸ ಮಾಡಬೇಕು. ಬರೆಯುವುದಕ್ಕೆ ಮುಂದಾಗುವವರ ಕಣ್ಣುಗಳಲ್ಲಿ ಅಸ್ಪೃಶ್ಯತೆ ಇರಬಾರದು” ಎಂದು ಅಭಿಪ್ರಾಯಪಟ್ಟರು.
ಜಗತ್ತಿನ ಮೇಲ್ಪದರವನ್ನು ತೋರಿಸುವುದಕ್ಕೆ       ಸಾಹಿತ್ಯವಲ.್ಲ ಸಾಮಾನ್ಯನಿಗೆ ಕಾಣಿಸದಿರುವುದನ್ನು ದ್ವನಿಸುವ ಪ್ರಯತ್ನವನ್ನು ಸಾಹಿತ್ಯ ಮಾಡಬೇಕು. ನೋಡುವುದಕ್ಕೆ ನೂರು ಬಗೆಗಳಿದ್ದ ಹಾಗೆ, ಸಾಹಿತ್ಯದ ಸೃಷ್ಟಿಯೂ ನೂರು ಬಗೆಗಳಲ್ಲಿ ಆಗಬೇಕು. ಮನಸ್ಸು ಮತ್ತು ನಿದ್ರೆಯ ನಡುವಿನ ಉದಾಸೀನತೆಯಿಂದ ಎಚ್ಚರಗೊಂಡಾಗ ಜಗತ್ತಿನಲ್ಲಿ ಅದೃಶ್ಯವಾಗಿರುವುದು ಕಾಣಿಸುತ್ತದೆ. ಸಾಹಿತಿಯಾದವನು ಅಂತಹ ವಿಚಾರಗಳನ್ನು ಆಯ್ಕೆ ಮಾಡಿಕೊಳ್ಳುವುದರ ಮೂಲಕ ಇಲ್ಲಿ ನಡೆಯುತ್ತಿರುವ ತಪ್ಪುಗಳ ವಿರುದ್ಧ ಪ್ರತಿಭಟನೆಯ ಕೂಗಿಗೆ ಜೀವಾಳವಾಗಿ ನಿಲ್ಲಬೇಕು ಎಂದರು.
ಬರವಣಿಗೆಯ ವಿಷಯಗಳ ಆಯ್ಕೆಯಲ್ಲಿಯೇ ತಪ್ಪಾಗುತ್ತಿದೆ. ವಿಷಯಗಳ ಆಯ್ಕೆಯೇ ಬರಹಗಾರರಿಗೆ ಬರವಣಿಗೆಯ ಕೌಶಲ್ಯವನ್ನು ಕಲಿಸಿಕೊಡುತ್ತದೆ. ಪ್ರಸ್ತುತತೆಯ ಸೆಳೆತ ಸಾಹಿತ್ಯಕ್ಕೆ ಮುಖ್ಯ. ಯಾವ ಬರಹ ಪ್ರಸ್ತುತತೆಗೆ ತೊಡಗಿಕೊಳ್ಳುವುದಿಲ್ಲವೋ ಅದು ಗೆಲ್ಲುವುದಕ್ಕೆ ಸಾಧ್ಯವಿಲ್ಲ ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕಾಲೇಜಿನ ಪ್ರಾಂಶುಪಾಲ ಪೆÇ್ರ| ಕೆ. ಉಮೇಶ್ ಶೆಟ್ಟಿಯವರು “ಸಾಹಿತ್ಯ ಕ್ಷೇತ್ರದಲ್ಲಿ ಹೊಸ ಚಿಂತನೆ ಅಗತ್ಯ. ಸಾಮಾಜಿಕ ಮಾಧ್ಯಮಗಳು ಎಲ್ಲರಿಗೂ ಬರೆಯುವುದಕ್ಕೆ ಅವಕಾಶ ಮಾಡಿಕೊಟ್ಟರೂ, ಅದು ಒಳ್ಳೆಯ ಬರಹಗಳ ಸೃಷ್ಟಿಗೆ ವೇದಿಕೆಯಾಗಿಲ್ಲ. ಹೊಸ ತಲೆಮಾರು ಬರವಣಿಗೆಯ ಕೌಶಲ ಬೆಳೆಸಿಕೊಳ್ಳುವುದಕ್ಕೆ ಇಂತಹ ಉಪನ್ಯಾಸ ವೇದಿಕೆಗಳು ಇನ್ನಷ್ಟು ಸೃಷ್ಟಿಯಾಗುವ ಅನಿವಾರ್ಯತೆ ಇದೆ” ಎಂದರು.
ಕಾಲೇಜಿನ ಉಪಪ್ರಾಂಶುಪಾಲರಾದ ಶ್ರೀ ಚೇತನ್ ಶೆಟ್ಟಿ ಕೋವಾಡಿ ಪ್ರಾಸ್ತಾವಿಸಿದರು. ಕನ್ನಡ ಸಂಘದ ಸಂಯೋಜಕರಾದ ಶ್ರೀಮತಿ ರೇಷ್ಮಾ ಶೆಟ್ಟಿ, ವಿನಯಾ ವಿ. ಶೆಟ್ಟಿ, ಕನ್ನಡ ಸಂಘದ ವಿದ್ಯಾರ್ಥಿ ಪ್ರತಿನಿಧಿ ದರ್ಶನ್ ಉಪಸ್ಥಿತರಿದ್ದರು.
ವಿದ್ಯಾರ್ಥಿಗಳಾದ ದೃಷಿತಾ ಸ್ವಾಗತಿಸಿ, ಸವಿನಾ ಅತಿಥಿಗಳನ್ನು ಪರಿಚಯಿಸಿ, ನಾಗಶ್ರೀ ಹೆಬ್ಬಾರ್ ವಂದಿಸಿದರು. ಕನ್ನಡ ಸಂಘದ ವಿದ್ಯಾರ್ಥಿ ಪ್ರತಿನಿಧಿ ಕೀರ್ತಿ ಕೆ. ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿದರು.

 

   

Related Articles

error: Content is protected !!