ಕೋಟೇಶ್ವರ : ಶ್ರೀ ಕಾಳಾವರ ವರದರಾಜ ಎಂ ಶೆಟ್ಟಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರ ಕುಂದಾಪುರ ಇಲ್ಲಿ ಜಿಲ್ಲಾ ಪಂಚಾಯತ್ ಉಡುಪಿ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗ ಉಡುಪಿ, ಅನುಷ್ಥಾನ ಬೆಂಬಲ ಸಂಪನ್ಮೂಲ ಸಂಸ್ಥೆ ಸ್ಕೊಡ್ವೆಸ್ ಶಿರಸಿ ಉ.ಕ. ಹಾಗೂ ಕಾಲೇಜಿನ ಇಕೋ ಕ್ಲಬ್ ಆಶ್ರಯದಲ್ಲಿ ಸ್ವಚ್ಚತಾ ಅರಿವು, ನೀರಿನ ಸಂರಕ್ಷಣೆ ಮತ್ತು ಮಳೆ ನೀರು ಕೊಯ್ಲು ವಿಷಯದ ಮೇಲೆ ಪ್ರಾತ್ಯಕ್ಷಿಕೆಯೊಂದಿಗೆ ಅರಿವು ಕಾರ್ಯಗಾರವನ್ನು ಹಮ್ಮಿಕೊಳ್ಳಲಾಗಿತ್ತು. ಜಲಜೀವನ್ ಮಿಷನ್ ಐಎಸ್ಆರ್ಎ ಯೋಜನೆಯಡಿ ಮತ್ತು ಕಾಲೇಜಿನ ಪ್ರಕೃತಿ ಬಗೆಗಿನ ಕಾಳಜಿಯ ಭಾಗವಾಗಿ ವಸ್ತು ಪ್ರದರ್ಶನವನ್ನೂ ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಕ್ರಮದಲ್ಲಿ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗ ಉಡುಪಿ ಇಲ್ಲಿನ ಸಹಾಯಕ ಅಭಿಯಂತರರಾದ ರವಿಶಂಕರ ಕೆ ರವರು ಜಲಜೀವನ್ ಮಿಷನ್ಕರ ಪತ್ರ ಬಿಡುಗಡೆಯನ್ನು ಮಾಡಿ ನೀರಿನ ಮಹತ್ವ ವಿವರಿಸುತ್ತಾ ಮನುಷ್ಯರು ಬೇಗನೆ ಜಾಗೃತಗೊಳ್ಳದಿದ್ದರೆ ಮಾನವ ಸಂಕುಲದ ಅಂತ್ಯ ಅತೀ ಶೀಘ್ರವಾಗುತ್ತದೆ. ಹಾಗಾಗಿ ಬಹಳ ಎಚ್ಚರಿಕೆಯಂದ ನೀರಿನ ಬಳಕೆ ಮಾಡಬೇಕೆಂದರು. ಮಳೆ ನೀರು ಕೊಯ್ಲು ಪ್ರಾತ್ಯಕ್ಷಿಕೆಯ ವಾಹನ ಮತ್ತು ಅದರ ವಿವಿಧ ವಿನ್ಯಾಸಗಳ ಮಾದರಿಗಳನ್ನು ಕಾಲೇಜಿನ ಪ್ರಾಂಶುಪಾಲರಾದ ರಾಮರಾಯ ಆಚಾರ್ಯ ಉದ್ಘಾಟಿಸಿದರು.
ಕಾರ್ಯಕ್ರಮದಲ್ಲಿ ಅಧ್ಯಕ್ಷತೆಯನ್ನೂ ವಹಿಸಿದ್ದ ಅವರು ಸ್ವಚ್ಚತೆ ನಮ್ಮ ಬದುಕಿನ ಗುರಿಯಾಗಬೇಕು. ಪ್ರಕೃತಿಯಿಂದ ನಾವು ಹೊರತು ನಮ್ಮಿಂದ ಪ್ರಕೃತಿ ಅಲ್ಲವೆಂಬುವುದು ಅತೀ ಮುಖ್ಯವಾದ ಅಂಶ, ಇದನ್ನು ಎಲ್ಲರೂ ಮನದಟ್ಟು ಮಾಡಿಕೊಳ್ಳಬೇಕು. ಮಾನವ ಎಷ್ಟೇ ಜಾಣನಾದರೂ, ಎಷ್ಟೇ ಹೊಸ ಹೊಸ ಆವಿಷ್ಕಾರ ಮಾಡಿದರೂ, ಪ್ರಕೃತಿಯ ಮೆಟ್ಟಿ ನಿಲ್ಲಲು ಅಸಾಧ್ಯವೆಂದು ಈ ಸಂದರ್ಭದಲ್ಲಿ ನುಡಿದರು. ರಾಜ್ಯ ಸಂಪನ್ಮೂಲ ವ್ಯಕ್ತಿಗಳಾದ ರತ್ನಶ್ರೀ. ಜೋಸೆಫ್ ರೆಬೆಲ್ಲೋ ಪ್ರಾಸ್ತಾವಿಕ ನುಡಿಗಳನ್ನಾಡಿದರು ಹಾಗೂ ಮಳೆ ನೀರು ಕೊಯ್ಲು ಮತ್ತು ಸಂರಕ್ಷಣೆ ಬಗ್ಗೆ ಸವಿವರವಾಗಿ ಮನ ಮುಟ್ಟುವಂತೆ ನೆರೆದ ವಿದ್ಯಾರ್ಥಿಗಳಿಗೆ ಮತ್ತು ಉಪನ್ಯಾಸಕರಿಗೆ ಪ್ರಾತ್ಯಕ್ಷಿಕೆ ನೀಡಿದರು. ಆಂತರಿಕ ಗುಣಮಟ್ಟ ಭರವಸಾ ಕೋಶ ಹಾಗೂ ಇಕೋ ಕ್ಲಬ್ ಸಂಯೋಜಕರಾದ ನಾಗರಾಜಯು ಸ್ವಾಗತಿಸಿದರು. ಇದೇ ಸಂದರ್ಭದಲ್ಲಿ ಜಲಜೀವನ್ ಮಿಷನ್ ಐಎಸ್ಆರ್ಎ ಉಡುಪಿಯ ಟೀಮ್ ಲೀಡರ್ ಆದ ಹರೀಶ್ ಶೆಟ್ಟಿ ಜಲಜೀವನ್ ಮಿಷನ್ನ ಧ್ಯೇಯೋದ್ಧೇಶಗಳನ್ನು ಸವಿವರವಾಗಿ ವಿವರಿಸುತ್ತಾ ಕಾಲೇಜಿನ ಪ್ರಕೃತಿ ಬಗೆಗಿನ ಕಾಳಜಿಯನ್ನು ಶ್ಲಾಘಿಸಿದರು. ವಾಣಿಜ್ಯಶಾಸ್ತç ವಿಭಾಗದ ಉಪನ್ಯಾಸಕಿಯಾದ ವಸುಧಾ ನಿರ್ವಹಿಸಿದ ಈ ಕಾರ್ಯಕ್ರಮದಲ್ಲಿ ಅಂತಿಮ ಬಿಕಾಂನ ವಿದ್ಯಾರ್ಥಿನಿಯರಾದ ಸ್ಪೂರ್ತಿ ಮತ್ತು ಶುಭ ಪ್ರಾರ್ಥಿಸಿದರು ಹಾಗೂ ಕನ್ನಡ ವಿಭಾಗದ ಮುಖ್ಯಸ್ಥರಾದ ನಾಗರಾಜ ವೈದ್ಯ ಎಂ ಇವರು ವಂದಿಸಿದರು. ಇಕೋ ಕ್ಲಬ್ನ ವಿದ್ಯಾರ್ಥಿ ನಾಯಕರಾದ ಶಶಿಧರ ಮತ್ತು ಸಿಂಚನ ವೇದಿಕೆಯಲ್ಲಿ ಉಪಸ್ಥಿತರಿದ್ದರು.