ಕುಂದಾಪುರ : ಆಧುನಿಕ ಹಣಕಾಸು ವ್ಯವಸ್ಥೆ ಉಳಿತಾಯ ಮತ್ತು ಹೂಡಿಕೆಗೆ ಹಲವು ಲಾಭದಾಯಕ ಅವಕಾಶಗಳನ್ನು ಒದಗಿಸುತ್ತದೆ. ವಿದ್ಯಾರ್ಥಿ ಜೀವನದಲ್ಲಿ ಇಂತಹ ವಿಚಾರಗಳನ್ನು ತಿಳಿದು ಅಳವಡಿಸಿಕೊಂಡರೆ ಉತ್ತಮ ಹಣಕಾಸು ನಿರ್ವಹಣೆ ಮತ್ತು ಗುರಿ ಸಾಧನೆ ಸಾಧ್ಯ. ಷೇರು ಮಾರುಕಟ್ಟೆ ಮತ್ತು ಮ್ಯೂಚ್ಯುವಲ್ ಫಂಡ್ ಉಳಿತಾಯವು ಉತ್ತಮ ಲಾಭ ತಂದು ಕೊಟ್ಟರೂ ಹೂಡಿಕೆಯು ಜ್ಞಾನ ಮತ್ತು ಕೌಶಲ್ಯ ಆಧಾರಿತವಾಗಿದೆ ಎಂದು ಉಡುಪಿಯ ಹೂಡಿಕೆ ತಜ್ಞ ಹಾಗೂ ಪೂರ್ಣಪ್ರಜ್ಞ ಕಾಲೇಜಿನ ಉಪನ್ಯಾಸಕ ಶ್ರೀ ರಾಮಚಂದ್ರ ಭಟ್ ಹೇಳಿದರು. ಅವರು ಸರಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರ, ಕೋಟೇಶ್ವರದ ವಾಣಿಜ್ಯ ಮತ್ತು ನಿರ್ವಹಣಾ ಸಂಘ ಮತ್ತು ಮುಂಬಯಿ ಷೇರು ಮಾರುಕಟ್ಟೆ ಹೂಡಿಕೆದಾರರ ರಕ್ಷಣಾ ನಿಧಿ ಜಂಟಿಯಾಗಿ ಆಯೋಜಿಸಿದ್ದ ಹೂಡಿಕೆ ಮತ್ತು ಅವಕಾಶಗಳು ಕುರಿತ ಮಾಹಿತಿ ಕಾರ್ಯಾಗಾರದಲ್ಲಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡುತ್ತಿದ್ದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಕಾಲೇಜಿನ ಪ್ರಾಂಶುಪಾಲ ಡಾ. ರಾಜೇಂದ್ರ ಎಸ್. ನಾಯಕ ವಿದ್ಯಾರ್ಥಿಗಳಿಗೆ ದುಡಿಮೆ ಮತ್ತು ಹೂಡಿಕೆಯ ಮಹತ್ವದ ಕುರಿತು ವಿವರಿಸಿದರು.
ಕಾಲೇಜಿನ ವಿದ್ಯಾರ್ಥಿ ಕ್ಷೇಮಾಪಾಲನಾಧಿಕಾರಿ ಶ್ರೀ ರಾಮರಾಯ ಆಚಾರ್ಯ ಉಪಸ್ಥಿತರಿದ್ದರು. ವಾಣಿಜ್ಯ ವಿಭಾಗ ಮುಖ್ಯಸ್ಥ ಡಾ. ಶೇಖರ್ ಬಿ ಸ್ವಾಗತಿಸಿದರು. ಕಾರ್ಯಕ್ರಮದ ಸಂಘಟಕ ಡಾ. ವೆಂಕಟರಾಮ್ ಭಟ್ ಪ್ರಾಸ್ತಾವಿಕ ಮಾತುಗಳನ್ನಾಡಿದರು. ವಿದ್ಯಾರ್ಥಿನಿ ಪವಿತ್ರ ಕಾರ್ಯಕ್ರಮ ನಿರ್ವಹಿಸಿದರು. ಐಕ್ಯೂಎಸಿ ಸಂಚಾಲಕ ಶ್ರೀ ನಾಗರಾಜ ಯು ವಂದಿಸಿದರು.