koteshwara : ಶ್ರೀ ಕಾಳಾವರ ವರದರಾಜ ಎಂ. ಶೆಟ್ಟಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಡಾ. ಬಿ.ಆರ್. ಅಂಬೇಡ್ಕರ್‍ರವರ 133ನೇ ಜಯಂತಿಯನ್ನು ಆಚರಿಸಲಾಯಿತು. ಕಾಲೇಜಿನ ಭೌತಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಡಾ. ಮುನಿರತ್ನಮ್ಮ ಎಲ್.ಎಂ. ಅವರು ಅಂಬೇಡ್ಕರ ಅವರು ಈ ಸಮಾಜದಲ್ಲಿ ಸಮಾನತೆಯ ಬದುಕಿಗಾಗಿ, ಮಹಿಳೆಯರ ಸ್ಥಾನಮಾನಕ್ಕಾಗಿ, ಅವರಿಗೆ ಸಿಗಬೇಕಾದ ಘನತೆ ಗೌರವಗಳಿಗಾಗಿ ಬದುಕನ್ನೆ ಮೀಸಲಿಟ್ಟ ಮಹಾತ್ಮರು. ಅವರು ನಮಗೆ ಕೊಡುಗೆಯಾಗಿ ನೀಡಿದ ಸಂವಿಧಾನ ನಮಗೆ ನಿರ್ಭಿತಿಯಿಂದ, ಅಭಿಮಾನದಿಂದ ಹಾಗೂ ಸ್ವತಂತ್ರರಾಗಿ ಬದುಕುವ ಅವಕಾಶವನ್ನು ಕಟ್ಟಿಸಿಕೊಟ್ಟಿದೆ. ಪ್ರತಿಯೊಬ್ಬರು ಮೂಲಭೂತ ಸೌಕರ್ಯಗಳ ಜೊತೆಗೆ ಮೂಲಭೂತ ಕತವ್ಯದ ಪಾಲನೆಯನ್ನು ಮಾಡಬೇಕು. ಅಂಬೇಡ್ಕರ್‍ರನ್ನು ನಮ್ಮ ಜೀವನದಲ್ಲಿ ಸದಾ ಸ್ಮರಿಸುವಂತಾಗಬೇಕೆಂದು ನುಡಿದರು. ಕಾಲೇಜಿನ ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿಗಳು ಅಂಬೇಡ್ಕರ್‍ರವರ ಜೀವನ-ಸಾಧನೆ ಕುರಿತು ಮಾತನಾಡಿದರು. ಅಂತಿಮ ಬಿ.ಎಸ್ಸಿ ವಿದ್ಯಾರ್ಥಿ ನರೇಂದ್ರ, ಅಂತಿಮ ಬಿ.ಕಾಂ. ವಿದ್ಯಾರ್ಥಿನಿ ಅನನ್ಯ ಇವರು ಅಂಬೇಡ್ಕರ್‍ರವರ ಬದುಕಿನ ಸಾಧನೆಯ ಕುರಿತು ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು. ಪ್ರಾಂಶುಪಾಲ ಡಾ. ರಾಜೇಂದ್ರ ಎಸ್. ನಾಯಕ ಅಧ್ಯಕ್ಷತೆ ವಹಿಸಿ ಅಂಬೇಡ್ಕರರ ಬದುಕಿನ ಆದರ್ಶಗಳನ್ನು ತಮ್ಮ ಜೀವನದಲ್ಲಿಯೂ ಪಾಲಿಸುವಂತೆ ಕರೆ ನೀಡಿದರು. ವಾಣಿಜ್ಯಶಾಸ್ತ್ರ ಸಹಾಯಕ ಪ್ರಾಧ್ಯಾಪಕರಾದ ಶ್ರೀಮತಿ ಸುಚಿತ್ರ ಹಾಗೂ ವಿದ್ಯಾರ್ಥಿ ವೇದಿಕೆಯ ಪದಾಧಿಕಾರಿಗಳು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಪ್ರಥಮ ಬಿ.ಕಾಂ. ಸ್ವಾತಿ ಹಾಗೂ ಸಂಗಡಿಗರು ಪ್ರಾರ್ಥಿಸಿದರು.