Home » ಕಾವ್ಯ ಹೃದಯದ ಭಾಷೆ
 

ಕಾವ್ಯ ಹೃದಯದ ಭಾಷೆ

ಡಾ. ಪಾರ್ವತಿ ಜಿ ಐತಾಳ್

by Kundapur Xpress
Spread the love

ಕೋಟೇಶ್ವರ : ಕಾವ್ಯ ಸಾಹಿತ್ಯದ ಒಂದು ಪ್ರಕಾರ. ಕಾವ್ಯ ಹೃದಯದ ಭಾಷೆ, ಗದ್ಯ ಮಸ್ತಿಷ್ಕದ ಭಾಷೆ. ಅತ್ಯಂತ ಕಡಿಮೆ ಶಬ್ದಗಳಲ್ಲಿ ಹೆಚ್ಚು ಅರ್ಥವನ್ನು ಹೇಳುವ ಶಕ್ತಿ ಕಾವ್ಯಕ್ಕಿದೆ. ಕಥೆ, ಕಾದಂಬರಿ ಇತರ ಪ್ರಕಾರಗಳಿಗಿಂತ ಭಿನ್ನವಾಗಿರುವ ಕಾವ್ಯ ನೇರವಾಗಿ ಹೇಳದೆ ರೂಪಕ, ಪ್ರತಿಮೆ, ಸಂಕೇತಗಳ ಮೂಲಕ ಮುಚ್ಚಿಡುವ ಗುಣ ಹೊಂದಿದೆ. ಕಾವ್ಯದಲ್ಲಿ ಕವಿ ಶಬ್ದಗಳಲ್ಲಿ ಸೌಂದರ್ಯಗಳನ್ನು ಬಣ್ಣಿಸುವ ಮೂಲಕ ಸಹೃದಯ ಓದುಗರನ್ನು ಚಿಂತನೆಗೆ ಹಚ್ಚುತ್ತಾನೆ. ಕವಿಯಾದವನಿಗೆ ವಿಶಾಲವಾದ ಓದಿನ ಜ್ಞಾನ, ಲೋಕ ಜ್ಞಾನ ಮತ್ತು ಅವಲೋಕನ ಮಾಡುವ ಗುಣವಿರಬೇಕು. ತಾನು ಬರೆದ ಕಾವ್ಯವನ್ನು ಕವಿಯೇ ಇಂತಹ ಕವಿಗೋಷ್ಠಿಗಳಲ್ಲಿ ವಾಚಿಸಿದಾಗ ಆತ್ಮಾನಂದದೊಂದಿಗೆ ವ್ಯಕ್ತಿತ್ವ ವಿಕಸನವಾಗುತ್ತದೆ. ವಿದ್ಯಾರ್ಥಿಗಳು ಇಂತಹ ಅವಕಾಶಗಳನ್ನು ಸದುಪಯೋಗಪಡಿಸಿಕೊಳ್ಳಬೇಕೆಂದು ಖ್ಯಾತ ಬರಹಗಾರರು, ಅನುವಾದಕರು ಹಾಗೂ ನಿವೃತ್ತ ಆಂಗ್ಲಭಾಷಾ ಪ್ರಾಧ್ಯಾಫಕರಾದ ಡಾ. ಪಾರ್ವತಿ ಜಿ. ಐತಾಳರವರು ಹೇಳಿದರು.
ಶ್ರೀ ಕಾಳಾವರ ವರದರಾಜ ಎಂ. ಶೆಟ್ಟಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಹಾಗೂ ಸ್ನಾತಕೋತ್ತರ ಅಧ್ಯಯನ ಕೇಂದ್ರ ಕುಂದಾಪುರ ಅಂಚೆ: ಕೋಟೇಶ್ವರ ಕಾಲೇಜಿನ ಕನ್ನಡ ಸಂಘ ಹಾಗೂ ಐಕ್ಯೂಎಸಿ ಆಶ್ರಯದಲ್ಲಿ ನಡೆದ ವಿದ್ಯಾರ್ಥಿ ಕವಿಗೋಷ್ಠಿಯನ್ನು ಉದ್ಘಾಟಿಸಿ ಅವರು ಮಾತನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲರಾದ ಡಾ. ರಾಜೇಂದ್ರ ಎಸ್. ನಾಯಕರವರು ವಹಿಸಿ ವಿದ್ಯಾರ್ಥಿ ಜೀವನದಲ್ಲಿ ಇಂತಹ ವೇದಿಕೆಗಳನ್ನು ಸದುಪಯೋಗಪಡಿಸಿಕೊಂಡರೆ ಕಲೆ, ಸಾಹಿತ್ಯದ ಬಗೆಗೆ ಅಭಿರುಚಿಯನ್ನು ಬೆಳೆಸಿಕೊಂಡರೆ ಯಶಸ್ವಿಯಾಗಿ ಭವಿಷ್ಯತ್ತನ್ನು ರೂಪಿಸಿಕೊಳ್ಳಬಹುದೆಂದು ತಿಳಿ ಹೇಳಿದರು. ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ರಾಮರಾಯ ಆಚಾರ್ಯ ಹಾಗೂ ಆಂತರಿಕ ಗುಣಮಟ್ಟ ಭರವಸಾ ಕೋಶದ ಸಂಚಾಲಕ ನಾಗರಾಜ ಯು, ವೇದಿಕೆಯಲ್ಲಿ ಉಪಸ್ಥಿತರಿದ್ದರು. ಇಪ್ಪತ್ತೆಂಟು ವಿದ್ಯಾರ್ಥಿ ಕವಿಗಳು ಸ್ವರಚಿತ ಕವನ ವಾಚಿಸಿದರು.
ಕನ್ನಡ ವಿಭಾಗದ ಮುಖ್ಯಸ್ಥ ನಾಗರಾಜ ವೈದ್ಯ ಎಂ. ಪ್ರಾಸ್ತಾವಿಕ ನುಡಿಯೊಂದಿಗೆ ಸ್ವಾಗತಿಸಿದರು. ಕು. ಚರಿತ ಪ್ರಾರ್ಥಿಸಿದರೆ ಕನ್ನಡ ಉಪನ್ಯಾಸಕ ಚಂದ್ರ ಕಾರ್ಯಕ್ರಮ ನಿರೂಪಿಸಿದರು, ವರದರಾಜ ಬಿ. ಅತಿಥಿಗಳನ್ನು ಪರಿಚಯಿಸಿದರೆ ಪ್ರೇಮಲಾಕ್ಷಿ ಕೆ.ಬಿ. ಕೊನೆಯಲ್ಲಿ ವಂದಿಸಿದರು.

   

Related Articles

error: Content is protected !!