ಕುಂದಾಪುರ: ರಾಮ್ಸನ್ ಸರಕಾರಿ ಪ್ರೌಢಶಾಲೆ ಕಂಡ್ಲೂರು ಇಲ್ಲಿ ಮುಖ್ಯೋಪಾಧ್ಯಾಯರಾದ ಶ್ರೀ ಸುರೇಶ್ ಭಟ್‌ರವರ ಅಧ್ಯಕ್ಷತೆಯಲ್ಲಿ ವಿಶ್ವ ಯೋಗ ದಿನಾಚರಣೆ ಕಾರ್ಯಕ್ರಮ ಜರುಗಿತು. “ಯೋಗ ಇಡೀ ವಿಶ್ವಕ್ಕೆ ಭಾರತ ನೀಡಿದ ಅಮೂಲ್ಯವಾದ ಭವ್ಯ ಪರಂಪರೆಯ ಕೊಡುಗೆ. ಮಾನಸಿಕ ನೆಮ್ಮದಿಯೊಂದಿಗೆ, ದೇಹಕ್ಕೆ ಹೊಸ ಉಲ್ಲಾಸವನ್ನು ನೀಡುವ ಯೋಗ ಹಲವಾರು ರೋಗಗಳನ್ನು ದೂರವಿಡುವಲ್ಲಿ ಮಹತ್ವದ ಪಾತ್ರ ವಹಿಸುತ್ತದೆ. ಯೋಗ ದಿನಾಚರಣೆಗೆ ಮಾತ್ರ ಮೀಸಲಾಗದೆ ದಿನವೂ ಆಚರಣೆಯಾದಾಗ ಶಿಸ್ತಿಗೆ ಬದ್ಧರಾದಾಗ, ಏಕಾಗ್ರತೆಯನ್ನು ಬೆಳೆಸಿಕೊಂಡು ಜೀವನದ ಗುರಿ ಸಾಧಿಸಿ ಯಶಸ್ವಿಯಾಗಲು ಸಾಧ್ಯವಾಗುತ್ತದೆ” ಎಂದು ಅವರು ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದರು. ದೈಹಿಕ ಶಿಕ್ಷಣ ಶಿಕ್ಷಕರಾದ ಶ್ರೀ ಅಣ್ಣಪ್ಪ ಎಂ. ಗೌಡ ಇವರ ಮಾರ್ಗದರ್ಶನದಲ್ಲಿ ಯೋಗಾಸನದ ವಿವಿಧ ಆಸನಗಳನ್ನು ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಜತೆಯಾಗಿ ಮಾಡಿದರು. ಕಾರ್ಯಕ್ರಮದಲ್ಲಿ ಶಿಕ್ಷಕರಾದ ಶ್ರೀ ಗೋಪಾಲ್ ವಿಷ್ಣು ಭಟ್, ಶ್ರೀಮತಿ ರಜನಿ ಎಸ್. ಹೆಗಡೆ, ಶ್ರೀ ಅಜಯ್ ಕುಮಾರ್ ಶೆಟ್ಟಿ, ಶ್ರೀ ನಿತ್ಯಾನಂದ ಶೆಟ್ಟಿ ಹಳ್ನಾಡು, ಶ್ರೀಮತಿ ಲಕ್ಷ್ಮಿ ಶೆಟ್ಟಿ, ಶ್ರೀಮತಿ ರತ್ನಾ, ಶ್ರೀ ಸಂತೋಷ್, ಕುಮಾರಿ ದಿಶಾ, ಶ್ರೀಮತಿ ವೈಶಾಲಿ ಭಾಗವಹಿಸಿದ್ದರು. ಎಲ್ಲಾ ವಿದ್ಯಾರ್ಥಿಗಳು ಸಕ್ರಿಯವಾಗಿ ಪಾಲ್ಗೊಂಡಿದ್ದರು.