ಕೋಟ : ಇಲ್ಲಿನ ಲಕ್ಷ್ಮೀ ಸೋಮ ಬಂಗೇರ ಸರಕಾರಿ ಪ್ರಥಮ ದರ್ಜೆ ಕಾಲೇಜು ಕೋಟ-ಪಡುಕರೆ ಜೂ.7ರಿಂದ 13ರವರೆಗೆ ಸೋಮ ಬಂಗೇರ ಸ್ಮಾರಕ ಸರಕಾರಿ ಪ್ರೌಢ ಶಾಲೆ ಹಾಗೂ ಸರಕಾರಿ ಪದವಿ ಪೂರ್ವ ಕಾಲೇಜು ಕೋಡಿ-ಕನ್ಯಾನ ಇಲ್ಲಿ ಹಮ್ಮಿಕೊಂಡಿರುವ ರಾಷ್ಟ್ರೀಯ ಸೇವಾ ಯೋಜನೆಯ ವಾರ್ಷಿಕ ವಿಶೇಷ ಶಿಬಿರವನ್ನು ಗೀತಾನಂದ ಫೌಂಡೇಶನ್ ಮಣೂರು ಪ್ರವರ್ತಕ ಆನಂದ.ಸಿ.ಕುಂದರ್ ಉದ್ಘಾಟಿಸಿದರು. ಈ ವೇಳೆ ಮಾತನಾಡಿ ವಿದ್ಯಾರ್ಥಿಗಳು ಸಮಾಜ ಸೇವೆ, ಪರಿಸರ ಸಂರಕ್ಷಣೆಗೆ, ಪರಸ್ಪರ ಹೊಂದಾಣಿಕೆ ಮುಂತಾದ ಉತ್ತಮ ಗುಣಗಳನ್ನು ರೂಢಿಸಲು ಎನ್‍ಎಸ್‍ಎಸ್ ಶಿಬಿರ ಅತ್ಯಂತ ಅಗತ್ಯ ಎಂದು ನುಡಿದರು. ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿದ್ದ ಸ್ಥಳೀಯ ಉದ್ಯಮಿ ಶಿವ ಎಸ್. ಕರ್ಕೇರ ಗ್ರಾಮೀಣ ಪ್ರದೇಶದಲ್ಲಾಗುತ್ತಿರುವ ಈ ವಾರ್ಷಿಕ ಶಿಬಿರ ಉತ್ತಮವಾಗಿ ನಡೆಯಲಿ ಎಂದು ಹಾರೈಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರಾಂಶುಪಾಲರಾದ ಡಾ. ಸುನೀತ ವಿ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಉದ್ಯಮಿ ಶಂಕರ ಕುಂದರ್, ಕಾಲೇಜು ಅಭಿವೃದ್ಧಿ ಸಮಿತಿಯ ಸದಸ್ಯ ರಮೇಶ್ ಹೆಚ್.ಕುಂದರ್, ಕೋಡಿ ಪಂಚಾಯತ್ ಅಭಿವೃದ್ಧಿ ಅಧಿಕಾರಿ ರವೀಂದ್ರ ರಾವ್, ಸರಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ರಾಘವೇಂದ್ರ ಅಡಿಗ, ಸೋಮ ಬಂಗೇರ ಸರಕಾರಿ ಪ್ರೌಢ ಶಾಲೆಯ ಮುಖ್ಯೋಪಾಧ್ಯಾಯರಾದ ರಾಧಿಕಾ, ಕಾಲೇಜಿನ ಹಳೆ ವಿದ್ಯಾರ್ಥಿ ಸಂಘ ಅಧ್ಯಕ್ಷ ಸುದಿನ ಹಾಗೂ ಪಂಚಾಯತ ಪೂರ್ವಾಧ್ಯಕ್ಷ ಪ್ರಭಾಕರ ಮೆಂಡನ್ ಉಪಸ್ಥಿತರಿದ್ದರು. ಎನ್.ಎಸ್.ಎಸ್. ಅಧಿಕಾರಿ ಡಾ. ಮನೋಜ ಕುಮಾರ್.ಎಂ ಸ್ವಾಗತಿಸಿ, ಶ್ರೀಕಾಂತ್.ಎ.ಪೂಜಾರಿ ವಂದಿಸಿದರು. ಕನ್ನಡ ಉಪನ್ಯಾಸಕರಾದ ಕು. ಮಮತಾ ಕಾರ್ಯಕ್ರಮ ನಿರೂಪಿಸಿದರು.