ವಿದ್ಯಾರ್ಥಿಗಳು ಪ್ರಥಮ ಪಿ.ಯು.ಸಿ.ಗೆ ಪ್ರವೇಶ ಪಡೆಯುವಾಗ ಗೊತ್ತಿದ್ದು,, ಇಲ್ಲವೇ ಗೊತ್ತಿಲ್ಲದೇ ಕೆಲವೊಮ್ಮ ತಪ್ಪಾದ ಸಂಯೋಜನೆಯನ್ನು ಆಯ್ದುಕೊಂಡು ಪ್ರಥಮ ಪಿ.ಯು.ಸಿ ಯಲ್ಲಿಯೇ ಎಡವುದು ಇದೆ. ಇಂತಹ ಸಂದರ್ಭದಲ್ಲಿ ತಾವು ಸಂಯೋಜನೆ ಬದಲಾವಣೆಯನ್ನು ಮಾಡಬೇಕಾದರೆ ಪುನಃ ಪ್ರಥಮ ಪಿ.ಯು.ಸಿಗೆ ಪ್ರವೇಶ ಪಡೆಯಬೇಕು. ಹೀಗಾದಲ್ಲಿ ಅವರ ಒಂದು ವರ್ಷ ನಷ್ಟವಾಗುತ್ತದೆ. ಅದಕ್ಕಾಗಿ ಕರ್ನಾಟಕ ಪದವಿ ಪೂರ್ವ ಶಿಕ್ಷಣ ಇಲಾಖೆ ಸಂಯೋಜನೆ ಬದಲಾವಣೆಯೊಂದಿಗೆ ನೇರವಾಗಿ ದ್ವಿತೀಯ ಪಿಯುಸಿ ಪರೀಕ್ಷೆ ಯನ್ನು ವಾಣಿಜ್ಯ ಮತ್ತು ಕಲಾ ವಿಭಾಗದಲ್ಲಿ ಬರೆಯಲು ಅವಕಾಶವನ್ನು ನೀಡಿದೆ. ಆದರೆ ಕೆಲವರು ಸಂಯೋಜನೆ ಬದಲಾವಣೆ ಮಾಡಲು ಅಪೇಕ್ಷೆ ಪಡುವುದಿಲ್ಲವಾದ್ದರಿಂದ ಅಂತವರಿಗೆ ಪ್ರಥಮ ಪಿ.ಯು.ಸಿಯಲ್ಲಿ ಕಲಿತ ಸಂಯೋಜನೆಯಲ್ಲಿಯೇ ಶಿಕ್ಷಣ ಮುಂದುವರಿಸುವ ಅವಕಾಶವಿದೆ. ಕಳೆದ 6 ವರ್ಷದಿಂದ ದ್ವಿತೀಯ ಪಿ.ಯು.ಸಿಯನ್ನು ವಿಜ್ಞಾನ ವಿಭಾಗದಲ್ಲಿ ಕಲಿಯ ಬಯಸುವವರಿಗೆ ನ್ಯಾಷನಲ್ ಇನ್ಸಿಟ್ಯೂಟ್ ಆಫ್ ಓಪನ್ ಸ್ಕೂಲಿಂಗ್ ನ ಮೂಲಕ ಪರೀಕ್ಷೆಯನ್ನು ಬರೆಯಲಾಗುತ್ತದೆ. ವೈದ್ಯಕೀಯ ಮತ್ತು ಇಂಜಿನಿಯರಿಂಗ್ಗೆ ಹೋಗ ಬಯಸುವ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ.
ಇಂತಹ ಒಂದು ವ್ಯವಸ್ಥೆಯನ್ನು ಬಳಸಿ ಕೊಂಡಿರುವ ಈ ಸಂಸ್ಥೆ ಕಳೆದ 25 ವರ್ಷಗಳಿಂದ ಅದೆಷ್ಟೋ ವಿದ್ಯಾರ್ಜನೆಯ ಹಾದಿಯಲ್ಲಿ ಎಡವಿದ ವಿದ್ಯಾರ್ಥಿಗಳಿಗೆ ಕಲಿಕೆಯ ಹೊಸ ದಾರಿಯನ್ನು ನಿರ್ಮಿಸಿಕೊಟ್ಟು, ಬಾಳಿನಲ್ಲಿ ಚೈತನ್ಯವನ್ನು ನೀಡುವಲ್ಲಿ ಸಫಲವಾಗಿದೆ. ಈ ಕಾಲೇಜಿನ ಶೈಕ್ಷಣಿಕ ವ್ಯವಸ್ಥೆ ಪ್ರತಿಷ್ಠಿತ ಶಾಲೆ/ ಕಾಲೇಜಿನ ಮಾದರಿಯಲ್ಲಿಯೇ ನಡೆಯುತ್ತದೆ. ಬೆಳಿಗ್ಗೆ ಪ್ರಾರ್ಥನೆಯಿಂದಲೇ ತರಗತಿಗಳು ಆರಂಭವಾಗುತ್ತಿದ್ದು ಪ್ರತಿಯೊಂದು ತರಗತಿಯಲ್ಲಿ 60 ವಿದ್ಯಾರ್ಥಿಗಳಿಗೆ ಪ್ರವೇಶ ನೀಡಲಾಗುತ್ತದೆ. ಒಟ್ಟು ನಾಲ್ಕು ತರಗತಿಗಳು ಏಕ ಕಾಲದಲ್ಲಿ ನಡೆಯುತ್ತದೆ. ಪಿ.ಯು.ಸಿ ಗೆ ಮೂರು ತರಗತಿಗಳು ಹಾಗೆಯೇ ಕಲಿಕೆಯಲ್ಲಿ ಹಿಂದುಳಿದ ಅಥವಾ ಕಾರಣಾಂತರದಿಂದ 8 , 9 ನೇ ತರಗತಿಯಲ್ಲಿ ವಿದ್ಯಾಭ್ಯಾಸ ಮೊಟಕುಗೊಳಿಸಿದ ವಿದ್ಯಾರ್ಥಿಗಳಿಗೆ ನೇರವಾಗಿ 10 ನೇ ತರಗತಿಯ ವಿದ್ಯಾರ್ಜನೆಗೆ ಅವಕಾಶ ಇದ್ದು ಕನ್ನಡ ಮತ್ತು ಇಂಗ್ಲೀಷ್ ಮಾಧ್ಯಮದ ಎರಡು ತರಗತಿಗಳು ನಡೆಯುತ್ತವೆ. ಅಲ್ಲದೆ ಮಧ್ಯಾಹ್ನದ ನಂತರ 10 ನೇ ತರಗತಿಯಲ್ಲಿ ಅನುತ್ತೀರ್ಣಗೊಂಡ ವಿದ್ಯಾರ್ಥಿಗಳಿಗೆ ತರಬೇತಿ ನೀಡಲಾಗುತ್ತದೆ.