ತೆಕ್ಕಟ್ಟೆ: ವಿಶ್ವ ವಿನಾಯಕ ಸಿ.ಬಿ.ಎಸ್.ಇ ಸ್ಕೂಲ್‍ನಲ್ಲಿ ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ವಿವಿಧ ಗಿಡಗಳನ್ನು ನೆಡುವುದರ ಮೂಲಕ ಪರಿಸರ ಸಂರಕ್ಷಣೆಯ ಕುರಿತು ಜಾಗೃತಿ ಮೂಡಿಸಿದರು. ಶಾಲಾ ಮೇನೆಂಜಿಂಗ್ ಡೈರೆಕ್ಟರ್ ಶ್ರೀ ಎಂ. ಪ್ರಭಾಕರ ಶೆಟ್ಟಿಯವರು ಮಾತನಾಡಿ ಪ್ರತಿಯೊಬ್ಬರೂ ಗಿಡಗಳನ್ನು ನೆಟ್ಟು ಪ್ರಕೃತಿಯನ್ನು ಪೋಷಿಸಿದರೆ ಮಾತ್ರ ಹಸಿರನ್ನು ಉಳಿಸಿ ಜೀವ ಸಂಕುಲದ ರಕ್ಷಣೆ ಸಾಧ್ಯ ಎಂದು ತಿಳಿಸಿದರು. ಶಾಲಾ ಪ್ರಾಂಶುಪಾಲರಾದ ಶ್ರೀ ನಿತಿನ್ ಡಿ’ ಆಲ್ಮೇಡಾರವರು ಮಾತನಾಡಿ ಏರುತ್ತಿರುವ ಜಾಗತಿಕ ತಾಪಮಾನವನ್ನು ನಿಯಂತ್ರಿಸಲು ಗಿಡಗಳನ್ನು ನೆಟ್ಟು ಪೋಷಿಸಬೇಕಾದ ಅನಿವಾರ್ಯತೆ ಇದೆ ಎಂದು ತಿಳಿಸಿದರು. ಶಾಲಾ ವಿದ್ಯಾರ್ಥಿಗಳು ಪ್ಲಾಸ್ಟಿಕ್ ನಿರ್ಮೂಲನೆ ಹಾಗೂ ಜೀವ ಸಂಕುಲದ ಉಳಿವಿಗೆ ಪ್ರಕೃತಿಯಲ್ಲಿನ ಗಿಡ ಮರಗಳ ಮಹತ್ವದ ಕುರಿತು ಕಿರು ಪ್ರಹಸನ ಹಾಗೂ ಗೀತೆಗಳನ್ನು ಹಾಡಿ ಅರಿವು ಮೂಡಿಸಿದರು. ಪ್ಲಾಸ್ಟಿಕ್ ಮುಕ್ತ ಪರಿಸರದ ಅರಿವು ಮೂಡಿಸಲು ಶಾಲಾ ವಿದ್ಯಾರ್ಥಿಗಳು ತೆಕ್ಕಟ್ಟೆ ಬಸ್ ಸ್ಯಾಂಡ್ ಹಾಗೂ ಸುತ್ತ ಮುತ್ತಲಿನ ಪ್ಲಾಸ್ಟಿಕ್ ತ್ಯಾಜ್ಯವನ್ನು ಆಯ್ದು ಪಂಚಾಯತ್ ಸಿಬ್ಬಂದಿಗೆ ನೀಡಿದರು. ಕಾರ್ಯಕ್ರಮದಲ್ಲಿ ಶಾಲಾ ವಿದ್ಯಾರ್ಥಿಗಳು, ಶಿಕ್ಷಕರು ಹಾಗೂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು. ವಿದ್ಯಾರ್ಥಿಗಳಾದ ಹಂಸವಿ ಕಾರ್ಯಕ್ರಮ ನಿರೂಪಿಸಿದರು, ನಿಶಾ ಸ್ವಾಗತಿಸಿದರು ರಶ್ವತ್ ವಂದಿಸಿದರು.