- ಆತ್ಮ-ವಿಶ್ವಾಸ
ದೇಹ ಅಳಿಯುವುದು ನಿಶ್ಚಿತ. ಆದರೆ ದೇಹವೆಂಬ ದೇಗುಲದಲ್ಲಿ ನಿರ್ಮಲ ಜ್ಯೋತಿಯಾಗಿ ವಿಜೃಂಭಿಸುವ ಆತ್ಮಕ್ಕೆ ಮಾತ್ರ ಅಳಿವಿಲ್ಲ. ನಿಜ, ಆದರೆ ಆತ್ಮದ ಕುರಿತಾಗಿ ಏನನ್ನಾದರು ಹೇಳಿದರೆ ಸಾಮಾನ್ಯವಾಗಿ ಕೂಡಲೇ ವಿಶ್ವಾಸ ಮೂಡುವುದಿಲ್ಲ. ಆತ್ಮವೆನ್ನುವುದು ಇದೆಯೇ ಎಂಬ ಮರು ಪ್ರಶ್ನೆ ಥಟ್ಟನೆ ಕೇಳಿ ಬರುತ್ತದೆ. ಆದರೆ ದೈನಂದಿನ ಬದುಕಿನಲ್ಲಿ ಯಾವುದಾದರೂ ಮಹತ್ಕಾರ್ಯಕ್ಕೆ ತೊಡಗುವಾಗ ನಮ್ಮಲ್ಲಿ ಆತ್ಮವಿಶ್ವಾಸವಿದೆ ಎಂದು ನಾವು ತಪ್ಪದೇ ಹೇಳಿಕೊಳ್ಳುತ್ತೇವೆ. ಆತ್ಮ ಇದೆಯೋ ಇಲ್ಲವೋ ಎಂದು ಶಂಕಿಸುವವರಿಗೆ ಆತ್ಮವಿಶ್ವಾಸವಂತೂ ಇದ್ದೇ ಇರುವುದನ್ನು ನಾವು ಕಾಣಬಹುದು! ಹಾಗಿದ್ದರೆ ಆತ್ಮನ ಬಗ್ಗೆ ಅರಿವು ಮೂಡಿಸಿಕೊಳ್ಳುವುದು ಹೇಗೆ? ದೇಹ, ಮನಸ್ಸು ಮತ್ತು ಬುದ್ಧಿಯನ್ನು ಗೆಲ್ಲುವ ಸಾಧನೆಯ ಮೂಲಕವಲ್ಲದೇ ಅನ್ಯ ಮಾರ್ಗವಿಲ್ಲ. ಗೀತಾಚಾರ್ಯ ಹೇಳುತ್ತಾನೆ. ಆತ್ಮಕ್ಕೆ ಸಾವಿಲ್ಲ, ದೇಹಕ್ಕೆ ಮಾತ್ರ ಎನ್ನುವ ಸತ್ಯವನ್ನು ಅರಿಯುವ ಸಾಧನೆಯ ಮಾರ್ಗ ದುರ್ಗಮವಾದದ್ದು. ಆತ್ಮನು ಯಾವ ಕಾಲದಲ್ಲಿಯೂ ಹುಟ್ಟುವವನೂ ಅಲ್ಲ, ಸಾಯುವವನೂ ಅಲ್ಲ, ಹಿಂದೆ ಉತ್ಪನ್ನನಾಗಿ ಈಗ ಇರುವವನೂ ಅಲ್ಲ. ಏಕೆಂದರೆ ಈ ಆತ್ಮ ಜನರಹಿತ, ನಿತ್ಯ, ಸನಾತನ ಮತ್ತು ಪುರಾತನನು. ಶರೀರ ಕೊಲ್ಲಲ್ಪಟ್ಟರೂ ಆತ್ಮ ಕೊಲ್ಲಲ್ಪಡುವುದಿಲ್ಲ. ಮನುಷ್ಯನು ಹಳೆಯ ಬಟ್ಟೆಯನ್ನು ತೆಗೆದುಹಾಕಿ ಬೇರೆ ಹೊಸ ಬಟ್ಟೆಯನ್ನು ಧರಿಸುವಂತೆ ಜೀವಾತ್ಮನು ಹಳೆಯ ಶರೀರವನ್ನು ಬಿಟ್ಟು ಬೇರೆ ಹೊಸ ಶರೀರರದಲ್ಲಿ ಪ್ರವೇಶ ಪಡೆಯುತ್ತಾನೆ. ಆತ್ಮನನ್ನು ಶಸ್ತ್ರಗಳು ಕತ್ತರಿಸಲಾರವು, ಬೆಂಕಿ ಸುಡಲಾರದು, ನೀರು ನೆನೆಯಿಸಲಾರದು ಮತ್ತು ಗಾಳಿ ಒಣಗಿಸಲಾರದು.