- ಶ್ರದ್ಧೆ ಎಂಬ ಸಂಸ್ಕಾರ
ದೇವರ ನಾಮಸ್ಮರಣೆಯನ್ನು ಅಭ್ಯಾಸಮಾಡಿಕೊಳ್ಳುವುದಕ್ಕೂ ಒಂದು ಸಂಸ್ಕಾರ ಬೇಕು. ಆ ಸಂಸ್ಕಾರವನ್ನು ಕೊಡುವ ಕರ್ತವ್ಯ ಗುರು ಹಿರಿಯರದ್ದು. ಹಾಗೆಯೇ ಅದನ್ನು ಮೈಗೂಡಿಸಿಕೊಳ್ಳುವ ಕರ್ತವ್ಯ ಕಿರಿಯರದ್ದಾಗಿದೆ. ಇಲ್ಲಿ ಗುರು ಎಂದರೆ ಸ್ವತಃ ತಾಯಿಯೇ ಆಗಿರುವಳು. ‘ಮನೆಯೆ ಮೊದಲ ಪಾಠ ಶಾಲೆ, ಜನನಿ ತಾನೇ ಮೊದಲ ಗುರುವು’ ಎಂಬ ಮಾತನ್ನು ಕೇಳದವರು ಯಾರು? ಸರಸ್ವತಿ ವಿದ್ಯಾಧಿದೇವತೆಯಾದರೆ ಮಗುವಿಗೆ ತನ್ನ ತಾಯಿಯೇ ಸರಸ್ವತಿ ದೇವಿ. ಗುರು-ಹಿರಿಯರನ್ನು ಗೌರವಿಸುವ, ದೇವರನ್ನು ಸ್ಮರಿಸುವ ಸಂಸ್ಕಾರ ಮಕ್ಕಳಿಗೆ ದೊರಕುವುದು ತಾಯಿಯಿಂದಲೇ. ನಾವೇನಾಗಿದ್ದೇವೆ ಎಂಬುದನ್ನು ನಮ್ಮ ನಾಲಗೆಯೇ ಹೇಳುತ್ತದೆ ಎಂಬ ಮಾತಿದೆ. ನಾಲಗೆ ನಮ್ಮ ಕುಲವೇನೆಂಬುದನ್ನು ಸುಲಭದಲ್ಲಿ ಸಾರುತ್ತದೆ. ಅದಕ್ಕೆ ದಾಸವರೇಣ್ಯರು ಪದೇಪದೇ ಎಚ್ಚರಿಸುತ್ತಾರೆ. ‘ಆಚಾರವಿಲ್ಲದ ನಾಲಗೆ, ನಿನ್ನ ನೀಚ ಬುದ್ಧಿಯ ಬಿಡು ನಾಲಗೆ…..’ ಎಂದು. ಸರಸ್ವತಿಯ ಆರಾಧನೆ ಎಂದರೆ ವಾಗ್ದೇವಿಯ ಆರಾಧನೆಯೇ ಆಗಿದೆ. ದೇವರ ನಾಮಸ್ಮರಣೆಯ ಅಭ್ಯಾಸ ಚಿಕ್ಕಂದಿನಿಂದಲೇ ಆಗಬೇಕಾದ ಕೆಲಸ. ಅದಕ್ಕೆ ಬೇಕಾದದ್ದು ಭಕ್ತಿ ಮತ್ತು ಶ್ರದ್ಧೆ. ಒಮ್ಮೆ ‘ಶ್ರದ್ಧೆಗೂ ಶ್ರಾದ್ಧಕ್ಕೂ ಇರುವ ಸಂಬಂವೇನು?’ ಎಂಬ ಪ್ರಶ್ನೆ ಎದ್ದಿತು. ಆಗ ವಿಚಾರವಂತರೊಬ್ಬರು ಹೇಳಿದರು. ಶ್ರಾದ್ಧವನ್ನು ಬಹಳ ಶ್ರದ್ಧೆಯಿಂದ ಮಾಡಬೇಕು. ಹಾಗೆಂದು ಶ್ರದ್ಧೆಯಿಂದ ಮಾಡುವಂತಹದ್ದೆಲ್ಲ ಶ್ರಾದ್ಧವಾಗಬಾರದು! ಇಲ್ಲಿ ಕೊನೆಯಲ್ಲಿ ಹೇಳಿರುವ ‘ಶ್ರಾದ್ಧ’ ಕೇವಲ ಶಿಷ್ಟಾಚಾರಕ್ಕೆ, ಹರಕೆ ಸಂದಾಯಕ್ಕೆ ಮಾಡುವ ಕೆಲಸವಲ್ಲದೆ ಬೇರೇನೂ ಅಲ್ಲ. ಶ್ರದ್ಧೆ ಇಲ್ಲದೇ ಮಾಡುವ ಕೆಲಸವೆಲ್ಲ ಭಯ-ಭಕ್ತಿ ಇಲ್ಲದೆ ಕೇವಲ ಶಾಸ್ತ್ರಕ್ಕಾಗಿ ಮಾಡುವ ಶ್ರಾದ್ಧವಲ್ಲದೇ ಇನ್ನೇನು?