ಐಹಿಕ ಸುಖಭೋಗವನ್ನು ನೆಚ್ಚಿಕೊಂಡವರಿಗೆ ಹುಟ್ಟು ಮತ್ತು ಸಾವಿನ ನಡುವಿನ ಜೀವತವಷ್ಟೇ ‘ಸತ್ಯ’ವಾಗಿ ಕಾಣುವುದರಿಂದ ಉಳಿದೆಲ್ಲವನ್ನೂ ಸಂದೇಹದ ದೃಷ್ಟಿಯಿಂದ ನೋಡುವುದೇ ಸಹಜ ಸ್ವಭಾವ. ಹುಟ್ಟುವ ಮೊದಲು ನಾವೇನಾಗಿದ್ದೆವು; ಸತ್ತ ಬಳಿಕ ಎಲ್ಲಿಗೆ ಹೋಗುವೆವು ಎಂಬುದು ನಮಗೆ ಚಿದಂಬರ ರಹಸ್ಯ. ಪಂಚೇಂದ್ರಿಯಗಳ ಪ್ರಮಾಣಕ್ಕೆ ಸಿಗದ ಯಾವ ವಿಷಯವನ್ನು ಒಪ್ಪಲೂ ನಾವು ಸಿದ್ಧರಿಲ್ಲ. ‘ಅವಿನಾಶಿಯಾದ ಯೋಗವನ್ನು ಕಲ್ಪದ ಆದಿಯಲ್ಲಿ ನಾನು ಸೂರ್ಯನಿಗೆ ಹೇಳಿದ್ದೆ’ ಎಂದು ಶ್ರೀ ಕೃಷ್ಣನು ಹೇಳಿದಾಗ ಅರ್ಜುನನು ಒಡನೆಯೇ ಕೇಳುವ ಪ್ರಶ್ನೆ ಏನು? ‘ನಿನ್ನ ಜನ್ಮವಾದತೋ ಇತ್ತೀಚಿನದ್ದು; ಸೂರ್ಯನ ಜನ್ಮವು ಬಹಳ ಪುರಾತನವಾದದ್ದು. ಆದುದರಿಂದ ನೀನು ಯೋಗವನ್ನು ಸೂರ್ಯನಿಗೆ ಹೇಳಿದ್ದೆ ಎಂದರೆ ನಾನು ನಂಬುವುದೆಂತು?’. ಹಿಂದಿನ ಜನ್ಮಗಳ ಸ್ಮೃತಿ ಇಲ್ಲದ ಅರ್ಜುನನಿಗೆ ಕೊನೆಗೆ ಕೃಷ್ಣನೇ ಸಮಾಧಾನ ಪಡಿಸುತ್ತಾನೆ; ‘ನನ್ನ ಮತ್ತು ನಿನ್ನ ಅನೇಕ ಜನ್ಮಗಳು ಆಗಿ ಹೋಗಿವೆ. ಅವನ್ನೆಲ್ಲ ನೀನು ತಿಳಿಯಲಾರೆ; ಆದರೆ ನಾನು ತಿಳಿದಿದ್ದೇನೆ’. ಅರ್ಜುನನು ತ್ರಿಲೋಕ ವೀರ ನಿಜ, ಆದರೆ ಶ್ರೀ ಕೃಷ್ಣನ ಮುಂದೆ ಆತ ಏನೂ ಅಲ್ಲ. ಹಾಗೆಯೇ ನಾವು ವಿದ್ಯೆ, ಬುದ್ಧಿ ಸಾಧನೆಯಿಂದ ಜ್ಞಾನಿಗಳೆಂದು ಕೊಚ್ಚಿಕೊಳ್ಳಬಹುದು. ಆದರೆ ದೇವರ ಕುರಿತಾಗಿ ನಮ್ಮಲ್ಲಿರುವ ಅವಿಶ್ವಾಸವೇ ಅಜ್ಞಾನದ ದ್ಯೋತಕವಾಗಿದೆ. ಹಿಂದಿನ ಜನ್ಮಗಳ ಸ್ಮೃತಿ ಅಂತಿರಲಿ, ಈ ಜನ್ಮದಲ್ಲೇ ಆಗಿ ಹೋಗಿರುವ ಅದೆಷ್ಟು ಘಟನಾವಳಿಗಳನ್ನು ನಾವು ನೆನಪಿರಿಸಿ ಕೊಂಡಿದ್ದೇವೆ? ವಾರದ ಹಿಂದೆ ಇದೇ ದಿನ, ಇದೇ ಹೊತ್ತಿನಲ್ಲಿ ನೀನೇನು ಮಾಡಿತ್ತಿದ್ದೆ’ ಎಂದು ಪ್ರಶ್ನಿಸಿದರೆ ನಿಖರವಾಗಿ ಹೇಳುವ ಸ್ಮರಣಶಕ್ತಿ ನಮಗಿದೆಯೇ? ನಮ್ಮ ದೌರ್ಬಲ್ಯವನ್ನು ಅರಿಯಲು ಯತ್ನಿಸದೆ ನಾವು ದೇವರ ಅಸ್ತಿತ್ವವನ್ನು ಪ್ರಶ್ನಿಸುವುದರಲಲಿ ನಮ್ಮ ‘ಅಜ್ಞಾನ’ವಲ್ಲದೆ ಬೇರೇನೂ ಬಯಲಾಗುವುದಿಲ್ಲ.