- ಶ್ರೇಷ್ಠ ಮಾಧ್ಯಮ
ಈ ಪ್ರಪಂಚದಲ್ಲಿರುವ ಸಮಸ್ತ ವಿಷಯಗಳು, ಸಂಗತಿಗಳು ನಮ್ಮ ಆತ್ಮೋದ್ಧಾರಕ್ಕೆ ಪೂರಕವಾಗಿಯೇ ಇವೆ ಎಂಬ ಅಂಶವನ್ನು ನಾವು ಮೊತ್ತ ಮೊದಲಾಗಿ ತಿಳಿಯಬೇಕು. ಈ ಪ್ರಪಂಚ ಹಾಗೂ ನಮ್ಮ ಬದುಕು ದೇವರನ್ನು ತಲುಪಲು ನಮಗೆ ಉಪಲಬ್ಧವಾಗಿರುವ ಒಂದು ಶ್ರೇಷ್ಠ ಮಾಧ್ಯಮ. ಈ ಪ್ರಪಂಚವೇ ನಮ್ಮ ಗುರಿಯೆಂದು ನಾವು ಭಾವಿಸಿದಲ್ಲಿ ನಾವು ಸಂಪೂರ್ಣವಾಗಿ ಐಹಿಕ ಸುಖಲೋಲುಪತೆಗೆ ನಮ್ಮನ್ನು ಒಡ್ಡಿಕೊಂಡು ಆತ್ಮೋನ್ನತಿಯ ಸಾಧನೆಯ ಮಾರ್ಗದಿಂದ ಭ್ರಷ್ಟರಾಗುತ್ತೇವೆ, ಪಾಶ್ಚಾತ್ಯ ಚಿಂತನೆ ಕ್ರಮದಲ್ಲಿ ಮನಷ್ಯನೆಂದರೆ ಆತನ ದೇಹ. ಹಾಗಾಗಿ ಪಾಶ್ಚಾತ್ಯರ ದೃಷ್ಟಿಯಲ್ಲಿ ದೇಹಕ್ಕೆ ಪ್ರಾಧಾನ್ಯ; ಆತ್ಮಕ್ಕಲ್ಲ. ಆದರೆ ಭಾರತೀಯ ಚಿಂತನೆ ತದ್ವಿರುದ್ಧ. ನಾವು ‘ಆತ್ಮ’ವೇ ವಿನಾ ದೇಹವಲ್ಲ ಎಂಬ ಪ್ರಜ್ಞೆಯನ್ನು ಯಥಾರ್ಥವಾಗಿ ಬೆಳೆಸಿಕೊಂಡರೆ ಮಾತ್ರವೇ ಇಂದ್ರಿಯ ವಿಷಯಗಳ ಸುಳಿಯಿಂದ ಪಾರಾಗಬಲ್ಲೆವು. ಇಲ್ಲದಿದ್ದರೆ ಕಾಮನೆಗಳೆಂಬ ರೋಗಾಣುಗಳು ನಮ್ಮ ಮೈ, ಮನ, ಬುದ್ಧಿಯನ್ನು ಸಂಪೂರ್ಣವಾಗಿ ನಾಶಮಾಡುವುವು. ಕ್ಷಣ ಕ್ಷಣಕ್ಕೂ ತನ್ನ ಸ್ವರೂಪವನ್ನು ಬದಲಿಸಿಕೊಳ್ಳುವ ಈ ಪ್ರಪಂಚವನ್ನು ನಾವು ಮೈಮರೆಯದೆ ಪ್ರೀತಿಸುವುದರಲ್ಲಿಯೇ ಸುಜ್ಞಾನವಿದೆ. ಆತ್ಮೋನ್ನತಿಯ ಸಾಧನೆಯಿಂದ ವಿಮುಖರಾಗದಿರುವ ಎಚ್ಚರ ಮಾತ್ರಸದಾ ಅಗತ್ಯ. ಅದಕ್ಕೆಂದೇ ವಿವೇಕಾನಂದರು ಹೇಳುತ್ತಾರೆ. ‘ನಾವು ಇನ್ನೂ ಉತ್ತಮ ಲೋಕಕ್ಕೆ ಹೋಗಲು ಮತ್ತು ಮುಕ್ತಾತ್ಮರಾಗಲು ಎಲ್ಲಿಯವರೆಗೆ ಈ ಪ್ರಪಂಚವು ಸಹಾಯ ಮಾಡುವುದೋ ಅಲ್ಲಿಯವರೆಗೂ ಇದು ನಮ್ಮ ಮಟ್ಟಿಗೆ ಒಳ್ಳೆದೇ ಆಗಿರುವುದು. ಹಾಗೆಯೇ ಹೆಂಡತಿ, ಮಕ್ಕಳು, ಐಶ್ವರ್ಯ, ಪಾಂಡಿತ್ಯ ಕೂಡ. ಯಾವಾಗ ನಮ್ಮ ಆತ್ಮೋನ್ನತಿಗೆ ಅವುಗಳಿಂದ ಸಹಾಯವಾಗುವುದಿಲ್ಲವೋ ಆಗ ಅವೆಲ್ಲವೂ ಕೆಟ್ಟವು’. ಆದುದರಿಂದ ಈ ಪ್ರಪಂಚವೇ ನಮಗೆ ಗುರಿಯಲ್ಲ. ಇದು ಪರಮಾತ್ಮನ ಸಾನಿಧ್ಯವನ್ನು ತಲುಪಲು ಒದಗಿರುವ ಶ್ರೇಷ್ಠ ಮಾಧ್ಯಮವಾಗಿದೆ.