Home » ಅಂತರಂಗದೊಳಗಿನ ವೈರಿ
 

ಅಂತರಂಗದೊಳಗಿನ ವೈರಿ

by Kundapur Xpress
Spread the love
  1. ಅಂತರಂಗದೊಳಗಿನ ವೈರಿ

ಆತ್ಮಜ್ಞಾನವನ್ನು ಗಳಿಸುವಲ್ಲಿ ನಮಗೆ ಅಡ್ಡಿಯುಂಟು ಮಾಡುವ ನಮ್ಮಲ್ಲಿನ ಕಾಮನೆಗಳು ಹುಟ್ಟಿ ಬಂದದ್ದಾದರೂ ಎಲ್ಲಿಂದ? ನಮ್ಮ ವೈರಿಗಳಾಗಿದ್ದು ಅವು ನಮ್ಮ ಒಳಗೆಯೇ ಏಕೆ ಮನೆಮಾಡಿಕೊಂಡಿವೆ? ಜೀವಾತ್ಮನಾಗಿ ನಮ್ಮಲ್ಲಿ ನೆಲೆಸಿರುವ ಪರಮಾತ್ಮನನ್ನು ಕಾಣಲು ನಮಗೇಕೆ ಅವು ಬಿಡುವುದಿಲ್ಲ? ಈ ಪ್ರಶ್ನೆಗಳಿಗೆ ನಾವು ಉತ್ತರವನ್ನು ಪಡೆಯುವುದು ಅಗತ್ಯ. ಹೋರಾಟವಿಲ್ಲದೆ ಸಾಧನೆ ಇಲ್ಲ ಎಂಬ ಮಾತನ್ನು ನಾವು ಒಪ್ಪುವುದಾದರೆ ಆತ್ಮ ಸಾಕ್ಷಾತ್ಕಾರದ ಸಾಧನೆಗೆ ಕೂಡ ನಾವು ಹೋರಾಟ ನಡೆಸುವುದು ಅಗತ್ಯ ಎನ್ನುವುದನ್ನು ತಿಳಿಯಬೇಕು. ನಮ್ಮ ಮನಸ್ಸೆಂಬುವುದು ಮಹಾ ಯುದ್ಧದ ಕುರುಕ್ಷೇತ್ರವೇ ಆಗಿದೆ. ಅಲ್ಲಿ ನಮ್ಮ ವೈರಿಗಳು ಕಾಮ ಕ್ರೋಧಾದಿ ಅರಿಷಡ್ವರ್ಗಗಳೇ ಆಗಿವೆ. ಅವುಗಳ ವಿರುದ್ಧ ಹೋರಾಡಿ ಗೆಲುವು ಸಾಧಿಸುವುದೇ ನಮ್ಮ ಕರ್ತವ್ಯ ಮತ್ತು ಧರ್ಮ. ಹೊರಗಿನ ವೈರಿಗಳನ್ನು ನಾವು ಜಯಿಸುವುದು ಕಷ್ಟದ ಮಾತಲ್ಲ; ಆದರೆ ಒಳಗಿನ ವೈರಿಯನ್ನು ಜಯಿಸುವುದು ಬಹಳ ದೊಡ್ಡ ಸಾಹಸದ ಕೆಲಸ. ಹೊರಗಿನ ವೈರಿಯನ್ನು ‘ವೈರಿ’ ಎಂದು ಗುರುತಿಸುವುದು ಕೂಡ ಸುಲಭ. ಆದರೆ ನಮ್ಮೊಳಗಿನ ವೈರಿಯನ್ನು ಹಾಗೆ ಸುಲಭದಲ್ಲಿ ನಾವು ಗುರುತಿಸಲಾರೆವು. ಆತ ಮಿತ್ರನ ವೇಷ ಧರಿಸಿರುವ ಶತ್ರು. ಮಿತ್ರನ ಹಾಗೆ ನಟಿಸುವಲ್ಲಿ ಆತ ನಿಪುಣ. ಸರಿಯಾದ ಹೊತ್ತಿನಲ್ಲಿ ಕೊರಳು ಕತ್ತರಿಸುವ ಕೌಶಲ ಆತನಲ್ಲಿದೆ. ಆದುದರಿಂದ ಮಿತ್ರನಾಗಿ ನಮ್ಮೊಳಗೆ ಮನೆಮಾಡಿ ಕೊಂಡಿರುವ ಶತ್ರುವಿನ  ನಿಜ ಬಣ್ಣವನ್ನಾಗಲೀ, ಆತನ ತಂತ್ರೋಪಾಯಗಳನ್ನಾಗಲೀ ಅರಿಯದೆ ನಾವು ಆತನ ವಿರುದ್ಧ ಯುದ್ಧ ಹೂಡಿದ್ದೇ ಆದಲ್ಲಿ ಸೋಲು  ನಮಗೆ ನಿಶ್ಚಿತ. ಆದುದರಿಂದಲೇ ನಮ್ಮೊಳಗಿನ ಶತ್ರುವಿನ ವಿರುದ್ಧ ನಮ್ಮ ಸಮರವು ಆರಂಭವಾಗುವುದು ನಮ್ಮನ್ನು ನಾವು ಅರಿಯುವ ಮೂಲಕವೇ!

   

Related Articles

error: Content is protected !!