Home » ಮಾಯೆಯ ಪ್ರಭಾವ
 

ಮಾಯೆಯ ಪ್ರಭಾವ

by Kundapur Xpress
Spread the love

ಪ್ರಕೃತಿಯೆಂಬ ಮಾಯೆಯ ಬಲೆಯೊಳಗೆ ಸಿಲುಕಿರುವ ನಾವು ಆತ್ಮನ ನಿಜ ಸ್ವರೂಪವನ್ನು ಊಹಿಸಲು ಕೂಡ ಆರಿಯೆವು. ಪ್ರಕೃತಿಯು ನಮ್ಮ ಮೇಲೆ ಮಾಡಿರುವ ಪ್ರಭಾವ ಅತ್ಯಂತ ಗುರುತವಾದದ್ದು. ಕ್ಷಣಕ್ಷಣಕ್ಕೂ ಬದಲಾಗುವ ಪ್ರಕೃತಿಗೆ ತಕ್ಕಂತೆ ನಮ್ಮ ಪಂಚೇಂದ್ರಿಯಗಳು ಸ್ಪಂದಿಸುವುದರಿಂದ ನಾವು ಮಾಯೆಯ ಅಧೀನವಾಗಿರುವೆವು. ಪಂಚೇಂದ್ರಿಯಗಳು ಬಯಸುವ ಸುಖಲೋಲುಪತೆಯನ್ನು ಸದಾ ಈಡೇರಿಸುತ್ತಲೇ ಇರುವ ಬದ್ಧತೆಗೆ ಒಳಗಾಗಿರುವೆವು. ಹಾಗಾಗಿಯೇ ಇಂದ್ರಿಯ ಸಹಜ ಗುಣಗಳಾಗಿರುವ ಕಾಮ ಕ್ರೋಧಾದಿಗಳನ್ನು ನಾವು ನಿರಂತರವಾಗಿ ಪ್ರಕಟಿಸುತ್ತಲೇ ಇರುವೆವು. ಈ ಒಟ್ಟು ಪ್ರಾಪಂಚಿಕ ವ್ಯವಹಾರದಲ್ಲಿ ‘ನಾನು ಯಾರು?, ಎಲ್ಲಿಂದ ಬಂದೆ? ಹೋಗುವುದೆಲ್ಲಿಗೆ?’ ಇತ್ಯಾದಿ ಪ್ರಶ್ನೆಗಳು ನಮ್ಮನ್ನು ಕಾಡುವುದೇ ಇಲ್ಲ. ಹೆಂಡತಿ, ಮಕ್ಕಳು, ಬಂಧುಬಳಗ, ಸಂಪತ್ತು, ಅಂತಸ್ತು, ಕೀರ್ತಿ ಕಾಮನೆಗಳು ಎಂಬ ಸುಳಿಯಲ್ಲಿ ಸಿಲುಕಿಕೊಂಡಿರುವ ನಮಗೆ ಇವು ಯಾವುದೂ ಶಾಶ್ವತವಲ್ಲ ಎಂಬ ಭಾವನೆಯೇ ಬರದು. ಹಾಗಾಗಿ ಅದಕ್ಕೆ ಅಂಟಿ ಕೊಂಡವರಂತೆ ಸ್ವಾರ್ಥಪರವಾಗಿ ಬದುಕು ನಡೆಸುತ್ತಿರುತ್ತೇವೆ. ತೀರ ಹತ್ತಿರದ ಬಂಧುಗಳು ಮರಣ ಹೊಂದಿದಾಗ ಮಾತ್ರವೇ ಸ್ವಲ್ಪ ಹೊತ್ತು ಮನಸ್ಸಿನಾಳ ಕಲಕಿದಂತಾಗುತ್ತದೆ. ಆದರೂ ಅನಂತರ ಮತ್ತೆ ಲೌಕಿಕ ಪ್ರಪಂಚಕ್ಕೆ ಹಿಂದಿರುಗುತ್ತೇವೆ. ಪ್ರಕೃತಿಯು ನಮ್ಮ ಮೇಲೆ ಉಂಟುಮಾಡುವ ಮಾಯೆಯು ಇಷ್ಟು ಗಾಢವಾಗಿರುವುದರಿಂದಲೇ ನಮಗೆ ನಮ್ಮೊಳಗೆ ಜೀವನಾತ್ಮನಾಗಿ ನೆಲೆಸಿರುವ ಪರಮಾತ್ಮನನ್ನು ಕಾಣುವುದು ಅಸಾಧ್ಯವಾಗುತ್ತದೆ. ಪ್ರಕೃತಿ ಎಂಬ ಮಾಯೆಯ ನಿರಂತರ ಪ್ರಭಾವಕ್ಕೆ ನಾವು ಗುರಿಯಾಗಿರುವುದರಿಂದ ನಮ್ಮೆಲ್ಲ ಆಸೆ-ಆಕಾಂಕ್ಷೆಗಳು ಅನಂತವಾಗಿವೆ. ನಮ್ಮ ಪಂಚೇಂದ್ರಿಯಗಳು ಬಹಿರ್ಮುಖಿಯಾಗಿರುವುದರಿಂದ ಪ್ರಕೃತಿಯ ಪ್ರಲೋಭನೆಗೆ ತಮ್ಮನ್ನು ಸಹಜವಾಗಿಯೇ ಒಡ್ಡಿ ಕೊಂಡಿದೆ  ಆದುದರಿಂದಲೇ ಆತ್ಮಸಾಕ್ಷಾತ್ಕಾರ ಬಹಳ ದೊಡ್ಡ ತಪಸ್ಸಾಗಿದೆ.

   

Related Articles

error: Content is protected !!