ನಮಗೆ ಆತ್ಮಜ್ಞಾನ ಪಡೆಯಲು ಅಡ್ಡಿಯುಂಟು ಮಾಡುವ ಕಾಮನೆಗಳು ನಿಜಕ್ಕೂ ಬ್ರಹ್ಮನ ಸ್ವರೂಪದ ಒಂದಂಶವೇ ಆಗಿದೆ. ಹಾಗಾಗಿ ಅದು ನಮ್ಮಲ್ಲಿಯೇ ಅಡಕವಾಗಿದೆ. ಈ ಪ್ರಪಂಚದಲ್ಲಿ ಜನ್ಮತಳೆದು ಕ್ರಮೇಣ ಪ್ರಕೃತಿಯ ಸಂಪರ್ಕಕ್ಕೆ ಬರುತ್ತಲೇ ನಮ್ಮಲ್ಲಿ ಅಂತರ್ಗತವಾಗಿರುವ ಕಾಮನೆಗಳು ಪ್ರಕೃತಿಯ ಗುಣಗಳಿಂದ ಪ್ರಚೋದನೆಗೆ ಒಳಗಾಗುತ್ತವೆ. ಇದಕ್ಕೆ ಸ್ವಭಾವ ಸಹಜವಾಗಿ ಪ್ರತಿಸ್ಪಂದಿಸುವ ಪಂಚೇಂದ್ರಿಯಗಳು ಆತ್ಮನ ಅಸ್ತಿತ್ವ ಎಂದೆಂದೂ ನಮ್ಮ ಅನುಭವಕ್ಕೆ ಬಾರದಂತೆ ತೆರೆ ಎಳೆಯುವಲ್ಲಿ ಸಫಲವಾಗುತ್ತವೆ. ನಮಗೆ ಇಲ್ಲೊಂದು ಪ್ರಶ್ನೆ ಎದುರಾಗುತ್ತದೆ: ಜೀವಾತ್ಮನ ರೂಪದಲ್ಲಿ ನಮ್ಮ ಹೃದಯ ದೇಗುಲದಲ್ಲಿ ನೆಲೆಸಿರುವ ಪರಮಾತ್ಮನು ನಮ್ಮನ್ನೇಕೆ ಇಂತಹ ಭಯಂಕರವಾದ ಸತ್ತ್ವ ಪರೀಕ್ಷೆಗೆ ಒಡ್ಡಬೇಕು? ನಾವೇಕೆ ಪ್ರಕೃತಿಯ ಬಲೆಗೆ ಸಿಲುಕಿ ಕಾಮನೆಗಳೆಂಬ ನರಕದಲ್ಲಿ ಬಿದ್ದು ಒದ್ದಾಡಬೇಕು? ಸ್ವಾಮಿ ವಿವೇಕಾನಂದರು ಒಂದೆಡೆ ಹೀಗೆ ಹೇಳುತ್ತಾರೆ: ‘ವಿಕಾಸವೇ ಜೀವನ, ಸಂಕೋಚವೇ ಮರಣ. ಪ್ರೇಮವೆಲ್ಲ ವಿಕಾಸ, ಸ್ವಾರ್ಥವೆಲ್ಲ ಸಂಕೋಚ, ಆದುದರಿಂದ ಪ್ರೇಮವೇ ಬದುಕಿನ ಧರ್ಮ’. ಇಲ್ಲಿ ವಿಕಾಸವೇ ಜೀವನ ಎಂಬ ಮಾತಿನ ಅರ್ಥ ಬಹಳ ಸೂಕ್ಷ್ಮವಾಗಿದೆ. ನಮ್ಮನ್ನು ನಾವು ಅರಿಯುವ ಪ್ರಕ್ರಿಯೆಯಲ್ಲಿ ವಿಕಾಸವಿದೆ. ಯಾವುದನ್ನೂ ನಾವು ಅನುಭವಿಸದೆ ಅದರ ಸತ್‍ಪರಿಣಾವನ್ನಾಗಲೀ ದುಷ್ಟಪರಿಣಾವನ್ನಾಗಲೀ ತಿಳಿಯಲಾರೆವು. ನಮ್ಮಲ್ಲಿನ ಅನಂತ ಕಾಮನೆಗಳನ್ನು ಈಡೇರಿಸುವ ಪ್ರಕ್ರಿಯೆಯಲ್ಲಿ ನಾವು ಅರಿಯುವ ಸತ್ಯವೇನು? ಅವುಗಳ ಇತಿಮಿತಿ! ನಮ್ಮನ್ನು ಮಹಾ ನರಕಕ್ಕೆ ತಳ್ಳುವ ಅವು ತರುವ ನಿರಂತರ ದುಃಖ. ಬೋನಿನೊಳಗಿನ ಸ್ವಾದಿಷ್ಟ ತಿನಿಸಿನಿಂದ ಆಕರ್ಷಿತವಾಗಿ ಅದನ್ನು ತಿನ್ನಲು ನುಗ್ಗುವ ಇಲಿ ಕೊನೆಗೆ ಹೇಗೆ ಬೋನಿನೊಳಗಿನ ಸಿಲುಕಿ ದುರಂತಕ್ಕೆ ಗುರಿಯಾಗುವುದೋ ಅದೇ ಪರಿಸ್ಥಿತಿ ನಮ್ಮದು. ಆದುದರಿಂದ ಆ ಕಾಮನೆಗಳ ಹಿಡಿತದಿಂದ ನಾವು ಪಾರಾಗುವುದು ಅಗತ್ಯ. ಹಾಗೆ ಪಾರಾಗುವ ಮೂಲಕವೇ ಆತ್ಮ ಸಾಕ್ಷಾತ್ಕಾರ ಸಾಧ್ಯ.