- ದೇಹಪ್ರಜ್ಜೆ
ದೇಹದ ಅಸ್ತಿತ್ವದಿಂದಲೇ ನಮ್ಮನ್ನು ನಾವು ಗುರುತಿಸಿಕೊಳ್ಳುವುದು ಸಹಜ ಮತ್ತು ಅನಿವಾರ್ಯ ಕೂಡ. ದೇಹವೇ ನಮಗೆ ಸರ್ವಸ್ವ. ದೇಹವೇ ನಾವು, ನಾವೇ ದೇಹ ಎನ್ನುವ ಭಾವನೆ ನಮ್ಮಲ್ಲಿ ಗಟ್ಟಿಯಾಗಲು ಇದುವೇ ಕಾರಣ. ಆದುದರಿಂದಲೇ ನಾವು ಸದಾ ದೇಹ ಪ್ರಜ್ಞೆಯೊಂದಿಗೇ ಬದುಕುತ್ತಿರುತ್ತೇವೆ. ದೇಶಪ್ರಜ್ಞೆ ಮತ್ತು ದೇವಪ್ರಜ್ಞೆ ನಮ್ಮನ್ನು ಕಾಡುವುದು ವಿರಳ! ಅಂತೆಯೇ ದೇಹದ ಅಂದ, ಚಂದ, ಸೊಬಗು, ಸೌಷ್ಠವ ಮತ್ತು ಸ್ವಾಸ್ಥ್ಯಕ್ಕೆ ನಾವು ವಿಶೇಷ ಪ್ರಾಧಾನ್ಯವನ್ನು ಕೊಡುತ್ತೇವೆ. ಆದರೆ ದೇಹಕ್ಕೆ ಅದರದ್ದೇ ಅದ ಸ್ವಭಾವವಿದೆ. ಹುಟ್ಟು, ಬೆಳವಣಿಗೆ ಪ್ರಾಧಾನ್ಯವನ್ನು ಕೊಡುತ್ತೇವೆ. ಕೊನೆಗೆ ಸಾವು ಅದರ ಮೂಲಧರ್ಮ. ದೇಹದ ಈ ಸ್ವಭಾವವನ್ನು ನಾವು ನಮ್ಮ ಮನಸ್ಸು, ಬುದ್ಧಿ, ತರ್ಕ ಮತ್ತು ಜ್ಞಾನದ ಬಲದಲ್ಲಿ ಅರ್ಥಮಾಡಿಕೊಳ್ಳಬಲ್ಲೆವು. ದೇಹದ ಇತಿ–ಮಿತಿಗಳನ್ನು ತಿಳಿಯಬಲ್ಲೆವು. ಆದರೂ ದೇಹದ ಮೇಲಿನ ಮೋಹವನ್ನು ತ್ಯಜಿಸಲಾರೆವು. ದೇಹವು ಸರ್ವರೋಗ ಮೂಲವೆಂಬ ಸತ್ಯವನ್ನು ಅರಿತೂ ಅದನ್ನು ದೇವರಿಗಿಂತಲೂ ಮಿಗಿಲಾಗಿ ಪ್ರೀತಿಸುವೆವು ಈ ಪ್ರೀತಿ–ಮೋಹದ ಹಿಂದೆ ಅಡಗಿರುವ ಭಾವ ಯಾವುದು? ಶಾಶ್ವತವೆಂಬ ಭಾವವೇ ಈ ಮೋಹಕ್ಕೆ ಕಾರಣ. ಇನ್ನೊಬ್ಬರ ಮರಣ ನಮ್ಮಲ್ಲಿ ಉಂಟುಮಾಡುವ ವೈರಾಗ್ಯವು ಕ್ಷಣಿಕವಾದ ‘ಶ್ಮಶಾನ ವೈರಾಗ್ಯ’. ‘ಸಾವು ನಿಶ್ಚಿತವೆಂದು ತಿಳಿದೂ ತಾನು ಈ ಭುವಿಯಲ್ಲಿ ಶಾಶ್ವತವೆಂದು ಭಾವಿಸಿ ಸ್ವಾರ್ಥಪರನಾಗಿ ಜೀವಿಸುವ ಮನುಜನ ಸ್ವಭಾವವೇ ಈ ಜಗತ್ತಿನ ಪರಮಾಶ್ಚರ್ಯದ ಸಂಗತಿ ಎಂದು ಯಕ್ಷನಿಗೆ ಧರ್ಮರಾಯ ಕೊಟ್ಟ ಉತ್ತರವನ್ನು ನಾವು ಮತ್ತೆ ಚಿಂತಿಸಬೇಕಾಗಿದೆ.