- ವಿದ್ಯೆ – ಅವಿದ್ಯೆ
ಆತ್ಮಜ್ಞಾನವನ್ನು ಪಡೆಯುವುದೇ ನಿಜವಾದ ಅರ್ಥದಲ್ಲಿ ವಿದ್ಯೆ ಎನಿಸಿಕೊಳ್ಳುತ್ತದೆ. ಯಾವ ಜ್ಞಾನವು ನಮ್ಮನ್ನು ಮುಕ್ತಿಯ ಕಡೆಗೆ ಒಯ್ಯುವುದೋ ಅದೊಂದೇ ನಿಜವಾದ ವಿದ್ಯೆ. ಉಳಿದವೆಲ್ಲ ಅವಿದ್ಯೆ. ಅವಿದ್ಯೆ ಎಂದಾಕ್ಷಣ ನಾವು ಶಾಲೆ-ಕಾಲೇಜುಗಳಲ್ಲಿ ಪಡೆಯುವ ಶಿಕ್ಷಣ ಕೂಡ ವಿದ್ಯೆಯೇ ಅಗೌರವವನ್ನು ತಳೆಯಬೇಕಾಗಿಲ್ಲ. ಶಾಲೆ-ಕಾಲೇಜುಗಳಲ್ಲಿ ಪಡೆಯುವ ಪಡೆಯುವ ಶಿಕ್ಷಣ ಕೂಡ ವಿದ್ಯೆಯೇ ಆದರೂ ಅದರ ಸ್ವರೂಪ ಸ್ವಲ್ಪ ಭಿನ್ನ. ಆ ವಿದ್ಯೆ ನಮ್ಮ ಲೌಕಿಕ ಜೀವನಕ್ಕೆ ಹತ್ತಿರವಾಗಿರುವುದರಿಂದ ಈ ಲೌಕಿಕ ಪ್ರಪಂಚದಲ್ಲಿ ನಮ್ಮ ಸಮಸ್ತ ಕಾಮನೆಗಳನ್ನು ಪೂರೈಸಲು ನೆರವಾಗುವ ಶಕ್ತಿ ಅದಕ್ಕಿದೆ. ಆದುದರಿಂದಲೇ ಈ ವಿದ್ಯೆ ನಮ್ಮೆಲ್ಲ ಐಹಿಕ ಸುಖ-ಸಂತೋಷಕ್ಕೆ, ಅಭ್ಯುಧಯಕ್ಕೆ ಪೂರಕವೂ ಪ್ರೇರಕವೂ ಆಗಿದೆ. ಲೌಕಿಕ ಜೀವನಕ್ಕೆ ಹತ್ತಿರವಾಗುವು ಮತ್ತು ನಮ್ಮ ಆಸೆ-ಆಕಾಂಕ್ಷಗಳನ್ನು ಪೂರೈಸಿಕೊಳ್ಳಲು ಶಕ್ತವಾಗಿರುವ ವಿದ್ಯೆಯ ಗಳಿಕೆಯಲ್ಲಿ ಸ್ಪರ್ಧಾಭಾವನೆ ಸಹಜವಾಗಿಯೇ ಅಡಕವಾಗಿದೆ. ಏಕೆಂದರೆ ಇತರರನ್ನು ಬುದ್ಧಿಮತ್ತೆಯಲ್ಲಿ ಸೋಲಿಸಿದಾಗಲೇ ಅವರಿಗೆ ಸಿಗಬಹುದಾಗಿದ್ದ ಕೀರ್ತಿ, ಅಂತಸ್ತು, ಅಧಿಕಾರ, ಸಂಪತ್ತು ನಮ್ಮ ಕೈವಶವಾಗುತ್ತದೆ. ಆದುದರಿಂಲೇ ನಾವು ದಿನನಿತ್ಯ ಪಡೆಯುವ ವಿದ್ಯೆಯು ನಮ್ಮಲ್ಲಿ ಪಾಂಡಿತ್ಯದ ಅಹಂಕಾರ, ಅಹಂಭಾವವನ್ನು ತರುತ್ತದೆ. ನಮಗಿಂತ ಕಡಿಮೆ ಬುದ್ಧಿಶಾಲಿಗಳ ಬಗ್ಗೆ ತಿರಸ್ಕಾರದ ಭಾವವನ್ನೂ ತರುತ್ತದೆ. ‘ನಾನೇ ಬುದ್ಧಿಶಾಲಿ, ನನಗಿಂತ ಬುದ್ಧಿಶಾಲಿಗಳಿಲ್ಲ, ಅಂತೆಯೇ ಎಲ್ಲರೂ ನನ್ನ ಪಾಂಡಿತ್ಯವನ್ನು ಗುರುತಿಸಿ ಗೌರವಿಸಿ ನನ್ನೆದುರು ತಗ್ಗಿ ಬಗ್ಗಿ ನಡೆಯಬೇಕು’ ಎಂಬ ಗರ್ವವನ್ನು ಅದು ತರುತ್ತದೆ. ಸ್ವಾರ್ಥಪರತೆಯನ್ನೂ ಹೆಚ್ಚಿಸುತ್ತದೆ. ಹಾಗಾಗಿ ಕಾಮ, ಕ್ರೋಧಾದಿಗಳು ನಮ್ಮಲ್ಲಿ ಸದಾ ಜ್ವಲಂತವಾಗಿರುತ್ತವೆ. ಪರಿಣಾಮವಾಗಿ ನಮ್ಮನ್ನದು ಭ್ರಾಮಕ ಲೋಕಕ್ಕೆ ತಳ್ಳುತ್ತದೆ. ಆತ್ಮಜ್ಞಾನವನ್ನು ಸಂಪಾದಿಸುವ ಮಾರ್ಗಕ್ಕೆ ತಡೆಯೊಡ್ಡುತ್ತದೆ.