123.ಶುಷ್ಕ ಪಾಂಡಿತ್ಯ
ಕೀರ್ತಿ ಅಂತಸ್ತು, ಅಧಿಕಾರ, ಸಂಪತ್ತು ಮೊದಲಾದ ಲೌಕಿಕ ಲಾಭವನ್ನು ತಂದುಕೊಡಬಲ್ಲ ಅವಿದ್ಯೆಯ ಪರಿಮಿತಿಯನ್ನು ನಾವು ಸರಿಯಾಗಿ ಗ್ರಹಿಸದೆ ಹೋದರೆ ನಿಜವಾದ ಅರ್ಥವನ್ನು ಹೊಂದಿರುವ ಆತ್ಮಜ್ಞಾನವೆಂಬ ವಿದ್ಯೆಯನ್ನು ನಾವು ತಿಳಿಯಲಾರೆವು. ಆತ್ಮಜ್ಞಾನವನ್ನು ಪಡೆಯುವ ಮಾರ್ಗದಲ್ಲಿ ಹೆಜ್ಜೆಹಾಕಲಾರೆವು. ಅವಿದ್ಯೆಯು ಲೌಕಿಕ ಜೀವನದ ಸಕಲ ಸುಖಭೋಗಗಳನ್ನು ಗಳಿಸಲು ನೆರವಾಗುವುದರಿಂದಲೇ ವಿದ್ಯಾಭ್ಯಾಸ ನಿರತರಲ್ಲಿ ಇಂದು ಇಷ್ಟೊಂದು ಸ್ಪರ್ಧಾ ಮನೋಭಾವನೆ ಮೂಡಿದೆ ಎನ್ನುವುದು ಸತ್ಯ. ನಾವು ವಿದ್ಯಾವಂತರಾಗಿಯೂ ಇನ್ನೊಬ್ಬರ ಉನ್ನತಿಯನ್ನು ಸಹಿಸಲಾರೆವಾದರೆ ಎಷ್ಟೊಂದು ಸಂಕುಚಿತ ಅರ್ಥದಲ್ಲಿ ವಿದ್ಯೆಯನ್ನು ಪಡೆದೆವು ಎನ್ನುವುದು ಸ್ಪಷ್ಟವಾಗುತ್ತದೆ. ನಿಜಕ್ಕಾದರೆ ಅದು ವಿದ್ಯೆಯ ತಪ್ಪಲ್ಲ. ಲೌಕಿಕ ಸುಖಭೋಗವನ್ನು ಪಡೆಯುವುದಕ್ಕಷ್ಟೇ ಆ ವಿದ್ಯೆಯನ್ನು ಸೀಮಿತಗೊಳಿದ್ದರ ಫಲ ಅದು. ನಮ್ಮಲ್ಲಿನ ಅರಿಷಡ್ವರ್ಗಗಳೇ ಲೌಕಿಕ ವಿದ್ಯೆಯನ್ನು ಅವಿದ್ಯೆಗೊಳಿಸಿರುವಂತೆ ಕಾಣುತ್ತದೆ. ದಾರ್ಶನಿಕರು ಅವಿದ್ಯೆಯನ್ನು ‘ಕರ್ಮ’ವೆಂದೂ ಕರೆದಿದ್ದಾರೆ. ನಾವು ಹುಟ್ಟಿದಾರಭ್ಯ ಕರ್ಮಾಸಕ್ತರಾಗಿರುವುದರಿಂದ ಅದರ ‘ಲಾಭಕರ’ ನಿರ್ವಹಣೆಗೆ ನಮಗೆ ವಿದ್ಯೆಯು ಅವಶ್ಯಕ. ಆದರೆ ಆ ಕರ್ಮಗಳನ್ನು ನಾವು ಭಗವತ್ ಸೇವೆಯಲ್ಲಿ ಅಭಿಮಾನವಿರಿಸಿ ಮಾಡದೇ ‘ನಾನೇ ಕೃರ್ತ’ವೆಂಬ ಅಹಂಕಾರದಲ್ಲಿ ಮಾಡುವುದರಿಂದ ಲೌಕಿಕ ವಿದ್ಯೆಯು ನಮ್ಮ ಮಟ್ಟಿಗೆ ‘ಅವಿದ್ಯೆ’ ಯೇ ಆಗಿದೆ. ಆದುದರಿಂದಲೇ ನಮಗೆ ವಿದ್ಯೆಯಿಂದ ವಿನಯ ಪ್ರಾಪ್ತವಾಗುವುದಿಲ್ಲ. ಅಹಂಕಾರ ಒಂದೇ ಪ್ರಾಪ್ತವಾಗುತ್ತದೆ. ಆ ಸ್ಥಿತಿಯಲ್ಲಿ ‘ಇತರರನ್ನು ಕೆಳಕ್ಕೆ ತಳ್ಳಿ ನಾನು ಮೇಲೆ ಬರಬೇಕು’ ಎಂಬುದೊಂದೇ ಪಾಂಡಿತ್ಯ ಗಳಿಕೆಯ ಉದ್ದೇಶವಾಗುತ್ತದೆ. ಮಹಾತ್ಮಾ ಗಾಂಧೀಜಿಯವರು ಯಾವತ್ತೂ ಹೇಳುತ್ತಿದ್ದ ಮಾತು ಹೀಗಿದೆ: ‘ ಅಗತ್ಯಕ್ಕಿಂತ ಹೆಚ್ಚಿನ ವಿದ್ಯೆಯಿಂದ ಆಗುವುದು ಇತರರ ಶೋಷಣೆ ಮಾತ್ರ.’