ಕಾಮರೂಪೀ ಶತ್ರುವನ್ನು ನಾಶ ಮಾಡುವ ಶಕ್ತಿ-ಯುಕ್ತಿ ನಮ್ಮೊಳಗೇ ಇದೆ ಎಂದು ಕೃಷ್ಣನು ಹೇಳಿರುವ ಮಾತುಗಳು ಆತ್ಮೋದ್ಧಾರಕ್ಕೆ ಆತ್ಯಾವಶ್ಯಕವಾಗಿವೆ. ಆತ್ಮಜ್ಞಾನದ ಬಲದಲ್ಲೇ ನಾವು ಕಾಮರೂಪೀ ಶತ್ರುವನ್ನು ಸಂಹರಿಸಬೇಕಾಗಿದೆ. ಆತ್ಮಜ್ಞಾನದ ಬುದ್ಧಿಬಲವನ್ನು ಹೆಚ್ಚಿಸಿಕೊಳ್ಳಬೇಕು. ಬುದ್ಧಿಬಲದಿಂದ ಮನಸ್ಸಿನ ಶಕ್ತಿಯನ್ನೂ ಏಕಾಗ್ರತೆಯನ್ನೂ ಬೆಳೆಸಿಕೊಳ್ಳಬೇಕು. ಮನಸ್ಸಿನ ಏಕಾಗ್ರತೆಯಿಂದ ಕಾಮರೂಪೀ ಶತ್ರುವನ್ನು ನಾಶಮಾಡಬೇಕು. ಇದು ಕೃಷ್ಣನು ತೋರಿಸಿರುವ ಉಪಾಯ. ವಿವೇಕಾನಂದರು ಒಂದೆಡೆ ಹೇಳುತ್ತಾರೆ: ಮನಸ್ಸನ್ನು ಶಕ್ತಿಯುತವೂ ಶಿಸ್ತುಬದ್ಧವೂ ಆಗಿಸುವುದರಲ್ಲಿಯೇ ಜ್ಞಾನದ ಮೌಲ್ಯ ಇದೆ. ಇಲ್ಲಿ ಜ್ಞಾನವೆಂದರೆ ಆತ್ಮಜ್ಞಾನವೇ ಆಗಿದೆ. ಆತ್ಮಜ್ಞಾನದ ಬಲದಲ್ಲೇ ನಾವು ನಮ್ಮೊಳಗೆ ದೇವರ ಅಂಶವನ್ನು ಕಾಣಲು ಸಾಧ್ಯ. ಹಾಗೆ ಕಾಣಲು ಸಾಧ್ಯವಾದರೆ ಮಾತ್ರವೇ ನಾವು ಶಕ್ತಿವಂತರೆಂಬ ಭಾವನೆಯನ್ನು ಬೆಳೆಸಿಕೊಳ್ಳಲು ಸಾಧ್ಯವಾಗುತ್ತದೆ. ಅದಕ್ಕೇ ಕೃಷ್ಣ ಹೇಳುತ್ತಾನೆ: ಆತ್ಮವು ಬುದ್ಧಿಗಿಂತ ಹೆಚ್ಚಿನದ್ದಾಗಿದೆ. ಅದು ಸೂಕ್ಷ್ಮವೂ ಎಲ್ಲ ರೀತಿಯಿಂದ ಬಲಾಢ್ಯವೂ ಶ್ರೇಷ್ಠವೂ ಅಗಿದೆ. ಆದುದರಿಂದ ಆತ್ಮನ ಈ ನಿಜ ಸ್ವರೂಪವನ್ನು ಅರಿತುಕೊಂಡು ಇದರ ಶಕ್ತಿಯಿಂದ ಬುದ್ಧಿಯನ್ನೂ ಬುದ್ಧಿಯ ಮೂಲಕ ಮನಸ್ಸನ್ನೂ ವಶಮಾಡಿಕೊಳ್ಳಬೇಕು. ಆಗಮಾತ್ರವೇ ಕಾಮರೂಪೀ ಶತ್ರುವಿನ ಸಂಹಾರ ಸುಲಭ ಸಾಧ್ಯವಾಗುತ್ತದೆ. ಇಷ್ಟಕ್ಕೂ ಆತ್ಮಬಲ ಪ್ರಾಪ್ತವಾಗುವುದು ಶುದ್ಧಚಾರಿತ್ರ್ಯದಲ್ಲಿ ಎನ್ನುವುದನ್ನು ನಾವು ಮರೆಯಬಾರದು. ಸ್ವಾಮಿ ವಿವೇಕಾನಂದರ ಪ್ರಕಾರ ‘ನಿಜವಾದ ಶಕ್ತಿ ಇರುವುದು ಸಾಧುಸ್ವಭಾದಲ್ಲಿ, ಚಾರಿತ್ರ್ಯ ಶುದ್ಧಿಯಲ್ಲಿ’. ಸಾಧು ಸ್ವಭಾವ ಇದ್ದಲ್ಲಿ ಕೋಪ-ತಾಪ ಉಂಟಾಗುವುದಿಲ್ಲ; ಅನಗತ್ಯವಾಗಿ ಶಕ್ತಿಯ ವ್ಯಯವಾಗುವುದಿಲ್ಲ. ಚಾರಿತ್ರ್ಯ ಶುದ್ಧಿ ಇರುವಲ್ಲಿ ಧರ್ಮಮಾರ್ಗವೇ ಪ್ರಧಾನವಾಗಿರುತ್ತದೆ.