- ಪ್ರೀತಿಯೇ ದೇವರು
ಪ್ರೀತಿಯೇ ದೇವರು ಎಂಬ ಮಾತನ್ನು ನಾವು ಕೇಳುತ್ತಿರುತ್ತೇವೆ. ಹಾಗೆಂದು ಹೇಳಲು ಕೂಡ ಸುಲಭ. ಕೇಳಲು ಕೂಡ ಇಂಪಾಗಿರುತ್ತದೆ. ಆದರೆ ನಿಜವಾದ ಪ್ರೀತಿ ಯಾವುದು ಎನ್ನುವುದನ್ನು ಅರಿಯುವುದು ಬಲು ಕಷ್ಟ. ತಾಯಿಗೆ ಮಗುವಿನ ಮೇಲಿರುವ ಪ್ರೀತಿ, ಪ್ರಿಯಕರನಿಗೆ ಪ್ರಿಯತಮೆಯ ಮೇಲಿರುವ ಪ್ರೀತಿ, ಮಕ್ಕಳಿಗೆ ತಾಯಿ-ತಂದೆಯರ ಮೇಲಿರುವ ಪ್ರೀತಿ, ಹೆತ್ತವರಿಗೆ ಮಕ್ಕಳ ಮೇಲಿರುವ ಪ್ರೀತಿ, ದೇಶಪ್ರೇಮಿಗಳಿಗೆ ತಾಯ್ನಾಡಿನ ಮೇಲಿರುವ ಪ್ರೀತಿ-ಹೀಗೆ ವಿವಿಧ ಬಗೆಯ ಸಂಬಂಧಗಳಲ್ಲಿ ಕಂಡು ಬರುವ ಪ್ರೀತಿಯನ್ನು ನಾವು ವಿವಿಧ ರೀತಿಯಲ್ಲಿ ಕಾಣಲು ಸಾಧ್ಯ. ಎಲ್ಲ ಬಗೆಯ ಲೌಕಿಕ ಪ್ರೀತಿಯಲ್ಲಿ ಸ್ವಾರ್ಥಪರತೆಯೇ ಅಂತರ್ಗತವಾಗಿರುತ್ತದೆ. ಹಾಗಾಗಿ ದೇವರ ಮೇಲಿನ ಪ್ರೀತಿ ಕೂಡ ಲೌಕಿಕರ ದೃಷ್ಟಿಯಿಂದ ಸ್ವಾರ್ಥಪರವಾಗಿಯೇ ಇರುವುದು ಸಹಜ. ದೇವರನ್ನು ನಿಜಕ್ಕೂ ನಾವು ಪ್ರೀತಿಸುತ್ತೇವೆಯೇ? ಆತನಲ್ಲಿ ನಮಗೆ ನಿಜಕ್ಕೂ ಭಯ-ಭಕ್ತಿ ಇದೆಯೇ? ಇದೆಂತಹ ಪ್ರಶ್ನೆ ಎಂದು ಹಲವರು ಮೂಗು ಮುರಿಯಬಹುದು. ಆದರೆ ಸತ್ಯವೇನೆಂದರೆ ಪ್ರಯೋಜನ ದೃಷ್ಟಿಯಿಂದಲ್ಲದೇ ನಾವು ಯಾರನ್ನೂ ಪ್ರೀತಿಸುವುದು ಬಂಧನ. ಎಲ್ಲರನ್ನೂ ಸಮಾನವಾಗಿ ಪ್ರೀತಿಸಲು ಸಾಧ್ಯವಾಗುವುದೇ ನಿಜವಾದ ಪ್ರೀತಿ. ಅಂತಹ ನಿಷ್ಕಳಂಕ ಪ್ರೀತಿಯಿಂದ ಎಲ್ಲ ಆಸೆಗಳು ಬಿದ್ದು ಹೋಗುತ್ತೇವೆ. ದೇವರ ಮೇಲಿನ ಪ್ರೀತಿ, ಭಕ್ತಿ ನಿಷ್ಕಳಂಕವಾಗಿರಬೇಕಾದರೆ ಅದು ಎಲ್ಲ ಬಗೆಯ ಸ್ವಾರ್ಥಪರ ಬೇಡಿಕೆಯಿಂದ ಮುಕ್ತವಾಗಿರಬೇಕು. ಇಲ್ಲದಿದ್ದರೆ ಅದು ಪ್ರೀತಿ ಎನಿಸಿಕೊಳ್ಳದು. ಕೇವಲ ಕೊಟ್ಟು-ತೆಗೆದುಕೊಳ್ಳುವ ವ್ಯಾಪಾರವಾದೀತು.