ಕೊಟ್ಟು-ತೆಗೆದುಕೊಳ್ಳುವುದು ಕೇವಲ ವ್ಯಾಪಾರವಾದೀತೇ ವಿನಾ ಪ್ರೀತಿಯಾಗದು ಎನ್ನುವುದನ್ನು ನಾವು ತಿಳಿಯಬೇಕು. ಹಾಗೆ ತಿಳಿಯದೆ ಹೋದರೆ ದೇವರನ್ನು ನಾವು ಪ್ರೀತಿಸುವುದು ಆತನಿಂದ ನಮ್ಮ ಯಾವುದೋ ಕೆಲವು ಐಹಿಕ ಬೇಡಿಕೆಗಳನ್ನು ಪೂರೈಸಿಕೊಳ್ಳುವುದಕ್ಕೆ ಮಾತ್ರ ಎನ್ನುವುದು ಸ್ಪಷ್ಟವಾಗುತ್ತದೆ. ಒಂದೊಮ್ಮೆ ನಾವು ಬೇಡಿಕೊಂಡದ್ದನ್ನು ಆತ ಕರುಣಿಸದೇ ಹೋದರೆ ಒಡನೆಯೇ ಆತನ ಮೇಲಿನ ನಮ್ಮ ಪ್ರೀತಿ ಮಾಯವಾಗಿ ಅದು ಸಿಟ್ಟು-ಕೋಪ-ತಾಪದ ಮಟ್ಟಕ್ಕೆ ಪರಿವರ್ತಿವಾಗುವುದು. ಹಾಗೆ ಕ್ಷಣಾರ್ಧದಲ್ಲಿ ಮೃದುವಾಗಿ ರೂಪಾಂತರಗೊಳ್ಳುವ ಪ್ರೀತಿ ನಿಜವಾದ ಅರ್ಥದಲ್ಲಿ ನಿಷ್ಕಳಂಕ ಪ್ರೀತಿ ಎನಿಸುವುದಿಲ್ಲ. ಒಂದು ಆತ್ಮವು ಇನ್ನೊಂದು ಜೀವಿಯೊಳಗಿನ ಆತ್ಮವನ್ನು ಗುರುತಿಸುವ ಪ್ರಕ್ರಿಯೆಯೇ ನಿಜವಾದ ನಿಷ್ಕಳಂಕ ಪ್ರೀತಿ. ದೇವರ ಸೃಷ್ಟಿಯನ್ನು ಸಮಗ್ರವಾಗಿ ಪ್ರೀತಿಸಲು ಸಾಧ್ಯವಾದರೆ ಮಾತ್ರವೇ ದೇವರನ್ನು ಆತನ ಸೃಷ್ಟಿಯ ತುಂಬೆಲ್ಲ ಎಲ್ಲಿ ಬೇಕಾದರೂ ಅಲ್ಲಿ ಕಾಣಲು ಸಾಧ್ಯವಿದೆ ಎಂದು ಜ್ಞಾನವೇತ್ತರು ಹೇಳುತ್ತಾರೆ. ವಿಷ್ಣು ಪುರಾಣದಲ್ಲಿ ಒಂದು ಮಾತಿದೆ: ಹರಿಯು ಸರ್ವಭೂತಗಳಲ್ಲಿಯೂ ಇರುವನು ಎಂದು ಅರಿತು ಜ್ಞಾನಿಗಳಾದವರು ತಾರತಮ್ಯದ ಭಾವವಿಲ್ಲದೆ ಎಲ್ಲರನ್ನೂ ಪ್ರೀತಿಸಬೇಕು. ಸ್ವಾಮೀ ವಿವೇಕಾನಂದರು ಹೇಳುತ್ತಾರೆ: ಎಲ್ಲ ಪ್ರೇಮಗಳ ಮೊತ್ತವೇ ದೇವರು. ಜೀವನಾಕಾಂಕ್ಷೆಯ ಸಾರ ಸಂಗ್ರಹವೇ ಭಗವಂತ ಎಂಬ ಮೂಲಭಾವನೆಯನ್ನು ಅರಿತಾಗಲೇ ವಿಶ್ವಪ್ರೇಮವನ್ನು ವ್ಯಕ್ತಪಡಿಸಲು ಸಾಧ್ಯವಾಗುತ್ತದೆ. ಪರೋಪಕಾರ ಮಾಡುವುದು ಸುಲಭವಾಗುತ್ತದೆ. ಎಲ್ಲರಲ್ಲಿ ಮತ್ತು ಎಲ್ಲದರಲ್ಲಿ ದೇವರನ್ನು ಕಾಣಲು ಸಾಧ್ಯವಾಗುತ್ತದೆ. ಆಗಲೇ ನಮ್ಮ ಅಹಂಕಾರ, ಒಣ ಹೆಮ್ಮೆಗಳೆಲ್ಲವೂ ಬಿಸಿಲಿನ ಸ್ಪರ್ಶಕ್ಕೆ ಕರಗಿ ನೀರಾಗುವ ಹಿಮದಂತೆ ಆಗುತ್ತವೆ.