- ನಿಶ್ಚಿತ ಸತ್ಯ
ಪರೋಪಕಾರದ ಬುದ್ಧಿ ಬರುವುದಾದರೂ ಎಲ್ಲಿಂದ? ತನ್ನಂತೆಯೇ ಇತರರು ಎಂದು ತಿಳಿದುಕೊಳ್ಳಲು ಸಾಧ್ಯವಾದಾಗ; ಇತರರ ನೋವು, ದುಃಖ, ದುಮ್ಮಾನಗಳನ್ನು ತಿಳಿಯಲು ಸಾಧ್ಯವಾದಾಗ. ಅದು ಸಾಧ್ಯವಾಗಬೇಕಿದ್ದರೆ ಎಲ್ಲರನ್ನೂ ಜೀವನಾತ್ಮನಾಗಿ ನೆಲೆಸಿರುವ ಪರಮಾತ್ಮನನ್ನು ಕಾಣುವ ಅಂತಃಚಕ್ಷುವನ್ನು ನಾವು ಹೊಂದಬೇಕು. ಅದಕ್ಕೇ ಕೃಷ್ಣ ಹೇಳುತ್ತಾನೆ: ಆತ್ಮವು ಬುದ್ಧಿಗಿಂತ ಹೆಚ್ಚಿನದ್ದಾಗಿದೆ. ಅದು ಸೂಕ್ಷ್ಮವೂ ಎಲ್ಲ ರೀತಿಯಿಂದ ಬಲಾಢ್ಯವೂ ಶ್ರೇಷ್ಠವೂ ಆಗಿದೆ. ಆದುದರಿಂದ ಆತ್ಮನ ಈ ನಿಜ ಸ್ವರೂಪವನ್ನು ಅರಿತುಕೊಂಡು ಇದರ ಶಕ್ತಿಯಿಂದ ಬುದ್ಧಿಯನ್ನೂ, ಬುದ್ಧಿಯ ಮೂಲಕ ಮನಸ್ಸನ್ನೂ ವಶಮಾಡಿ ಕೊಳ್ಳಬೇಕು, ಆಗ ಮಾತ್ರವೇ ಕಾಮರೂಪೀ ಶತ್ರುವಿನ ಸಂಹಾರ ಸುಲಭ ಸಾಧ್ಯವಾಗುತ್ತದೆ. ಇಷ್ಟಕ್ಕೂ ಆತ್ಮಬಲ ಪ್ರಾಪ್ತವಾಗುವುದು ಶುದ್ಧಚಾರಿತ್ರ್ಯದಲ್ಲಿ ಎನ್ನುವುದನ್ನು ನಾವು ಮರೆಯಬಾರದು. ಸ್ವಾಮಿ ವಿವೇಕಾನಂದರ ಪ್ರಕಾರ ‘ನಿಜವಾದ ಶಕ್ತಿ ಇರುವುದು ಸಾಧುಸ್ವಭಾವದಲ್ಲಿ, ಚಾರಿತ್ರ್ಯ ಶುದ್ಧಿಯಲ್ಲಿ.’ ಸಾಧು ಸ್ವಭಾವ ಇದ್ದಲ್ಲಿ ಕೋಪ-ತಾಪ ಉಂಟಾಗುವುದಿಲ್ಲ; ಅನಗತ್ಯವಾಗಿ ಶಕ್ತಿಯ ವ್ಯಯವಾಗುವುದಿಲ್ಲ. ಚಾರಿತ್ರ್ಯ ಶುದ್ಧಿ ಇರುವಲ್ಲಿ ಧರ್ಮಮಾರ್ಗವೇ ಪ್ರಧಾನವಾಗಿರುತ್ತದೆ.