- ವಿಜಯ ಸಾಧನೆ
ಫಲಾಪೇಕ್ಷೆ ಇಲ್ಲದೆ ಕರ್ಮನಿರತರಾಗುವುದು ಸಾಧ್ಯವೆ? ಐಹಿಕ ಬದುಕಿಗೆ ಅಂಟಿಕೊಂಡಿರುವ ನಮಗೆಲ್ಲ ಇದೊಂದು ಯಕ್ಷಪ್ರಶ್ನೆಯೇ ಆಗಿದೆ. ಫಲಾಪೇಕ್ಷೆ ಇಲ್ಲದೆ ಕರ್ಮ ನಿರತರಾಗಬೇಕಾದರೆ ಎಲ್ಲಕ್ಕಿಂತ ಮುಖ್ಯವಾಗಿ ನಾವು ನಮ್ಮಲ್ಲಿನ ಅಹಂಭಾವವನ್ನು ಆಮೂಲಗ್ರವಾಗಿ ಕಿತ್ತೊಗೆಯಬೇಕು. ಐಹಿಕ ಬದುಕಿನಲ್ಲಿ ನಮ್ಮ ಮನಸ್ಸಿನ ಸುಖ, ಶಾಂತಿ, ಸಮಾಧಾನವನ್ನು ಕೆಡಿಸುವ ದೊಡ್ಡ ಶತ್ರುವೇ ಈ ಅಹಂಭಾವ. ದೇಹ ಸೌಂದರ್ಯ, ದೇಹ ಬಲ ನಮ್ಮಲ್ಲಿ ಅಪಾರವಾದ ಅಹಂಭಾವ ನಮ್ಮಲ್ಲಿನ ವಿನಯಶೀಲತೆಯನ್ನು ನಾಶ ಮಾಡುತ್ತದೆ. ಅಧಿಕಾರ, ಅಂತಸ್ತು, ಕೀರ್ತಿ ಇತ್ಯಾದಿಗಳೆಲ್ಲವೂ ನಮ್ಮಲ್ಲಿ ಅಹಂಕಾರದ ಮದವನ್ನು ಹೆಚ್ಚಿಸುತ್ತವೆ. ಮನಸ್ಸಿನ ಸಮತ್ವವನ್ನು ನಾಶ ಮಾಡುವ ಅಹಂಭಾವವು ನಮ್ಮನ್ನು ಅಜ್ಞಾನದಲ್ಲಿ ಮುಳುಗಿಸುತ್ತದೆ. ದೇಹವೇ ನಾನೆಂಬ ಭ್ರಾಂತಿಯನ್ನು ಅದು ನಮ್ಮಲ್ಲಿ ಹುಟ್ಟಿಸುವ ಮೂಲಕ ದುಃಖಮಯವಾದ ಪ್ರಾಪಂಚಿಕ ಬದುಕಿಗೆ ನಮ್ಮನ್ನು ಗಟ್ಟಿಯಾಗಿ ಬಿಗಿಯುತ್ತದೆ. ಹಾಗಾಗಿ ಮಿಥ್ಯಾ ಪ್ರಪಂಚದ ವ್ಯವಹಾರಗಳಲ್ಲಿ ನಾವು ತೀವ್ರವಾಗಿ ತೊಡಗಿಕೊಳ್ಳುತ್ತೇವೆ. ಲಾಭ-ನಷ್ಟಗಳೇ ಪ್ರಧಾನವಾಗಿ ಭ್ರಾಮಕ ಸುಖ-ದುಃಖಗಳೇ ನಿಜವೆಂಬಂತೆ ಅವುಗಳ ವಿಷ ಸುಳಿಯಲ್ಲಿ ಸಿಲುಕಿಕೊಳ್ಳುತ್ತೇವೆ. ಫಲಭರಿತವಾದ ವೃಕ್ಷದ ರೆಂಬೆ ಕೊಂಬೆಗಳು ಭೂಮಿಯೆಡೆಗೆ ಬಾಗಿಕೊಳ್ಳುವಲ್ಲಿ ಅಹಂಭಾವದ ಲವಲೇಶವೂ ಇಲ್ಲದಿರುವುದನ್ನು ನಾವು ಕಾಣಬೇಕು. ಆ ವೃಕ್ಷದ ಹಾಗೆ ನಾವು ಕೂಡ ವಿದ್ಯೆ. ಸಂಪತ್ತು, ಅಧಿಕಾರ, ಅಂತಸ್ತು, ಕೀರ್ತಿಯಿಂದ ಬಾಧಿತರಾಗದೆ ಬದುಕಿನ ಕ್ಷಣಭಂಗುರತೆಯ ಅರಿವನ್ನು ಹೊಂದಿರಬೇಕು. ವಿನಯಶೀಲತೆಯಿಂದಲೇ ನಾವು ಅಹಂಭಾವವನ್ನು ಗೆಲ್ಲಬೇಕು ಎಂದು ಸ್ವಾಮಿ ವಿವೇಕಾನಂದರು ಹೇಳುತ್ತಾರೆ. ಗೀತೆಯಲ್ಲಿ ಶ್ರೀ ಕೃಷ್ಣನು ಬೋಧಿಸುವ ಮನಸ್ಸಿನ ಸಮತ್ವವನ್ನು ನಾವು ಅಹಂಭಾವವನ್ನು ಗೆಲ್ಲುವ ಮೂಲಕ ಪಡೆಯಬೇಕು. ಆ ಗೆಲುವಿನಲ್ಲಿ ದೇಹ, ಮನಸ್ಸು ಹಾಗೂ ಇಂದ್ರಿಯಗಳ ಮೇಲಿನ ವಿಜಯವಿದೆ. ಅಂತಹ ವಿಜಯವನ್ನು ಸಾಧಿಸುವ ಯೋಗಿಯು ತನಗೆ ತಾನೇ ಮಿತ್ರನಾಗಿರುತ್ತಾನೆ. ತನ್ನೊಳಗೂ ಹೊರಗೂ ಎಲ್ಲೆಲ್ಲೂ ದೇವರನ್ನು ಕಾಣಲು ಆತನಿಗೆ ಸಾಧ್ಯವಾಗುತ್ತದೆ. ಆತನ ಅಂತಃಕರಣದ ಪ್ರವೃತ್ತಿಗಳು ಶಾಂತವಾಗಿರುತ್ತವೆ. ಅಂತೆಯೇ ಆತನಿಗೆ ಸಚ್ಚಿದಾನಂದವು ಪ್ರಾಪ್ತವಾಗುತ್ತದೆ.