- ಆಂತರ್ಯದ ಅರಿವು
‘ನೀನಿಲ್ಲಿ ಹುಟ್ಟಿ ಬಂದಿರುವುದು ನಿನ್ನ ಅಪೇಕ್ಷೆಯಂತೆ ಅಲ್ಲ; ನನ್ನ ಅಪೇಕ್ಷೆಯಂತೆ’ ಎಂಬ ಮಾತು ಪವಿತ್ರ ಗ್ರಂಥಗಳಲ್ಲಿ ಕಾಣಸಿಗುತ್ತದೆ. ಎಂದರೆ ದೇವರೇ ನಮ್ಮನ್ನು ತನ್ನ ಪ್ರತಿನಿಧಿಯಾಗಿ ಈ ಭೂಮಿಗೆ ಕಳುಹಿಸಿದ್ದಾನೆ. ಆತನ ಅಪೇಕ್ಷೆಗೆ ಅನುಸಾರವಾಗಿ ನಾವು ಬದುಕಿನ ಉದ್ದಕ್ಕೂ ಸತ್ಕರ್ಮಗಳನ್ನು ಕೈಗೊಳ್ಳಬೇಕಾಗಿದೆ. ಅತನ ಅಪ್ಪಣೆಯ ಪ್ರಕಾರ ನಾವು ಸನ್ಮಾರ್ಗದಲ್ಲಿ ನಡೆಯಬೇಕಾಗಿದೆ. ಮೋಕ್ಷದ ಗುರಿಯನ್ನು ತಲುಪಬೇಕಾಗಿದೆ. ಆದರೆ ಭಗವಂತನ ಈ ಮಾಯಾ ಲೋಕದಲ್ಲಿ ನಾವು ಎಲ್ಲವನ್ನೂ ಮರೆತಿದ್ದೇವೆ ಮಾತ್ರವಲ್ಲ ‘ಮೈಮರೆತು’ ಬದುಕುತ್ತಿದ್ದೇವೆ. ದೇವರು ನಮ್ಮ ಮೇಲೆ ಹೊರಿಸಿರುವ ಜವಾಬ್ದಾರಿಯನ್ನು ಸಂಪೂರ್ಣವಾಗಿ ಮರೆತುಬಿಟ್ಟಿದ್ದೇವೆ. ಇಂದ್ರಿಯಗಳನ್ನು ಪ್ರಕೃತಿಯ ಪ್ರಲೋಭನೆಗೆ ಒಡ್ಡಿಕೊಂಡಿದ್ದೇವೆ. ಇಂದ್ರಿಯ ಸುಖವೇ ಪರಮ ಸುಖವೆಂಬ ಭ್ರಮೆಯಲ್ಲಿ ಬದುಕುತ್ತಿದ್ದೇವೆ. ಪರಿಣಾಮವಾಗಿ ನಿರಂತರ ಸಂಕಷ್ಟಕ್ಕೆ ಗುರಿಯಾಗಿದ್ದೇವೆ. ಬದುಕಿನ ನಿಜವಾದ ಸುಖ, ಸಂತೋಷ, ಆನಂದ ನಮ್ಮೊಳಗೇ ಇದೆ. ಆ ಆನಂದವು ಪರಮಾತ್ಮನನ್ನು ಕಂಡುಕೊಳ್ಳುವುದರಲ್ಲೇ ಇದೆ ಎನ್ನುವುದರ ಅರಿವು ನಮಗಿಲ್ಲ. ಬದುಕಿನ ಜಂಜಡದಲ್ಲಿ ಮುಳುಗಿರುವ ನಮಗೆ ‘ಕೆಸರಿನಲ್ಲಿ ಜನಿಸಿಯೂ ತನ್ನ ಪಾವಿತ್ರ್ಯವನ್ನು ಕಳೆದುಕೊಳ್ಳದ ಕಮಲ’ದ ಹಾಗಿರಲು ಸಾಧ್ಯವೆಂಬ ತಿಳಿವಳಿಕೆ ಇಲ್ಲ. ನೀರಿನಲ್ಲಿದ್ದೂ ನೀರಿನ ಸೋಂಕಿಲ್ಲದೆ ಶುಭ್ರವಾಗಿರುವ ಕಮಲಪತ್ರದ ಹಾಗೆ ನಾವು ಬಂಧಮುಕ್ತರಾಗಿರಲು ಸಾಧ್ಯವೆಂಬ ಅರಿವಿಲ್ಲ. ಇದಕ್ಕೆ ಕಾರಣ ನಾವು ಸಂಪೂರ್ಣವಾಗಿ ಹೊರಗಿನ ಪ್ರಕೃತಿಗೆ ಅಧೀನವಾಗಿ ಬಾಳುತ್ತಿರುವುದೇ ಆಗಿದೆ. ಪ್ರಪಂಚದಲ್ಲಿ ಹೊರಗೆ ಕಾಣಿಸುತ್ತಿರುವುದೆಲ್ಲವೂ ನಮ್ಮ ಒಳಗೇ ಇದೆ ಎಂಬ ಸತ್ಯವನ್ನು ಕಾಣಲು ನಾವು ಪ್ರಯತ್ನಿಸಬೇಕು. ಆಗಲೇ ಸುಖ–ಶಾಂತಿ–ಸಂತಸ ಎಲ್ಲವೂ ನಮ್ಮ ಒಳಗೇ ಇದೆ ಎನ್ನುವುದನ್ನು ಕಾಣಲು ಸಾಧ್ಯ. ಅದುವೇ ನಿಜವಾದ ಅರ್ಥದಲ್ಲಿ ಸೃಷ್ಟಿಶೀಲತೆ.