- ಪರಮ ಸಾನಿಧ್ಯ
ಇಂದಿನ ನಮ್ಮ ಆಧುನಿಕ, ನಾಗರಿಕ ಬದುಕು ತೋರಿಕೆಯ ಹೊರನೋಟಕ್ಕೆ ಸುಖಮಯವಾಗಿರುವಂತೆ ಕಂಡುಬರುತ್ತದೆ. ಆದರೆ ವಾಸ್ತವವಾಗಿ ಅದು ಹಾಗಿಲ್ಲ. ಕೇವಲ ಐಶಾರಾಮದ ಉಪಕರಣಗಳನ್ನು ಬಳಸುವ ಮೂಲಕ ನಾವು ಸುಖದಿಂದ ಬಾಳುತ್ತಿದ್ದೇವೆ ಎಂಬ ಭ್ರಮೆಯಲ್ಲಿದ್ದೇವೆ. ಐಶಾರಾಮದ ಉಪಕರಣಗಳಿಂದ ದೇಹಕ್ಕೆ ಸೌಖ್ಯ ದೊರಕೀತೇ ವಿನಾ ಮನಸ್ಸಿಗಲ್ಲ, ಮನಸ್ಸಿನ ಆನಂದ ಯಾವುದೇ ಉಪಕರಣಗಳಿಂದ ಸಿಗುವುದಿಲ್ಲ. ಆದುದರಿಂದಲೇ ಐಶಾರಮದ ಬದುಕು ಪಡೆಯುವ ಸುಖ ಕ್ಷಣಿಕ. ಅಂತೆಯೇ ದುಃಖದಾಯಕ. ಸಂಪತ್ತು, ಅಂತಸ್ತು, ಅಧಿಕಾರ, ಕೀರ್ತಿ ಕಾಮನೆಗಳ ಬೆನ್ನು ಹತ್ತಿರುವ ನಮಗೆ ಜೀವನವು ಸಹಜವಾಗಿಯೇ ಸಂಘರ್ಷಕಾರಿಯಾಗಿದೆ. ಸಂಪತ್ತಿನ ಅಧಿದೇವತೆಯಾದ ಲಕ್ಷ್ಮಿಯನ್ನು ಒಲಿಸಿಕೊಳ್ಳಲು ನಾವೆಲ್ಲರೂ ತುದಿಗಾಲಲ್ಲಿ ನಿಂತು ಪ್ರಯತ್ನಿಸುತ್ತಿರುತ್ತೇವೆ. ಆಕೆ ಚಂಚಲೆ ಎಂದು ಬೇರೆ ಹೇಳುತ್ತೇವೆ. ಇದ್ದಲ್ಲಿ ಇರುವ ಸ್ವಭಾವ ಆಕೆಯದ್ದಲ್ಲ ಎಂಬುದನ್ನೂ ಅರಿತಿದ್ದೇವೆ. ಆದರೂ ಆಕೆಯನ್ನು ನಮ್ಮ ತಿಜೋರಿಯಲ್ಲಿ ಬಂಧಿಸಿಡುವ ಹುನ್ನಾರ ನಮ್ಮದಾಗಿದೆ. ನಿಜಕ್ಕಾದರೆ ಲಕ್ಷ್ಮೀ ಚಂಚಲೆಯಲ್ಲ. ಆಕೆಗೆ ನಾರಾಯಣನ ಜತೆಗಿರುವುದನ್ನು ಬಿಟ್ಟರೆ ಬೇರೆ ಎಲ್ಲಿಯೂ ಇರುವ ಮನಸ್ಸಿಲ್ಲ. ನಮ್ಮ ಆರಾಧನೆಯ ಬಲದಲ್ಲಿ ಸ್ವಲ್ಪಕಾಲ ಆಕೆ ನಮೊಂದಿಗಿದ್ದ ಮಾತ್ರಕ್ಕೆ ಸದಾ ಕಾಲವೂ ನಮ್ಮೊಂದಿಗೇ ಆಕೆ ಇರುವಳೆಂಬ ಭ್ರಾಂತಿಯನ್ನು ನಾವು ಬೆಳೆಸಿಕೊಳ್ಳುತ್ತೇವೆ. ಲಕ್ಷ್ಮಿ ನಮ್ಮ ಜತೆ ಇರಬೇಕೆಂದು ನಾವು ಬಯಸುವಂತೆ, ಆಕೆಯೂ ತಾನು ಸದಾ ನಾರಾಯಣನೊಡನೆ ಇರಬೇಕೆಂದು ಬಯಸುವುದು ತಪ್ಪೇ? ಆದುದರಿಂದ ನಾವು ಲಕ್ಷ್ಮಿಯನ್ನು ಮಾತ್ರವಲ್ಲ, ನಾರಯಣನನ್ನೂ ಒಲಸಿಕೊಳ್ಳಬೇಕು. ನಾರಾಯಣನಿರುವಲ್ಲಿ ಲಕ್ಷ್ಮಿಯು ಸಹಜವಾಗಿಯೇ ಇರುವಳೆಂಬ ರಹಸ್ಯವನ್ನು ಅರಿತರೆ ನಮ್ಮ ಕೆಲಸ ಸಾರ್ಥಕ. ಆದರೆ ನಾವು ನಾರಾಯಣನಲ್ಲಿ ನಾವು ಬೇಡಬೇಕಾದದ್ದು ಆತನ ಪರಮ ಸಾನಿಧ್ಯವನ್ನು ಮಾತ್ರ, ಬೇರೇನನ್ನೂ ಅಲ್ಲ.