‘ಕಲ್ಪದ ಆದಿಯಲ್ಲಿ ನಾನು ಈ ಅವಿನಾಶಿಯಾದ ಯೋಗವನ್ನು ಸೂರ್ಯನಿಗೆ ಹೇಳಿದೆನು. ಆ ಬಳಿಕ ಸೂರ್ಯನು ತನ್ನ ಪುತ್ರನಾದ ವೈವಸ್ವತ ಮನುವಿಗೆ ಅದನ್ನು ಹೇಳಿದನು. ಅನಂತರ ಮನುವು ತನ್ನ ಮಗನಾದ ರಾಜಾ ಇಕ್ಷಾಕ್ಷುವಿಗೆ ಅದನ್ನು ಹೇಳಿದನು. ಆ ಬಳಿಕ ಕಾಲಾಂತರದಲ್ಲಿ ಮನುಕುಲಕ್ಕೆ ನಷ್ಟವಾಗಿ ಹೋದ ಆ ಪುರಾತನ ಯೋಗವನ್ನು ಇದೀಗ ನಾನು ಭಕ್ತನೂ ಪ್ರಿಯ ಸ್ನೇಹಿತನೂ ಆಗಿರುವ ನಿನಗೆ ಹೇಳುವೆನು’ ಎಂದು ಕೃಷ್ಣನು ಅರ್ಜುನನಿಗೆ ಗೀತೋಪದೇಶದ ವೇಳೆ ಹೇಳಿದಾಗ ಅರ್ಜುನನಿಗೆ ಒಡನೆಯೇ ಕಾಡುವುದು ಕೃಷ್ಣನ ಮಾತಿನ ಸತ್ಯಾಸತ್ಯತೆ! ಕೃಷ್ಣ ಹೇಳುತ್ತಿರುವುದು ನಿಜವೋ ಸುಳ್ಳೋ ಎಂಬ ಶಂಕೆ ಅರ್ಜುನನದ್ದು. ಸಂದೇಹ ಪಡುವ ಸಹಜ ಸ್ವಭಾವದ ದೃಷ್ಟಿಯಿಂದ ನೋಡಿದರೆ ಅರ್ಜುನ ನಿಜಕ್ಕೂ ನಮ್ಮ ನೇರ ಪ್ರತಿನಿಧಿ. ಕೃಷ್ಣನ ಮಾತಿನಲ್ಲಿ ಅವನಿಗೆ ಕೂಡಲೇ ವಿಶ್ವಾಸ ಮೂಡುವುದಿಲ್ಲ. ನಮಗೂ ಅಷ್ಟೇ. ನಾವು ದೇವರ ಭಕ್ತರೆಂದು ಹೇಳಿಕೊಂಡರೂ ದೇವರ ಮೇಲೆ ಪೂರ್ತಿ ವಿಶ್ವಾಸ ನಮಗಿಲ್ಲ! ಕಷ್ಟಕಾಲ ಒದಗಿದರಂತೂ ದೇವರ ಮೇಲಿನ ವಿಶ್ವಾಸ ಕುಂಠಿತಗೊಳ್ಳುತ್ತಾ ಹೋಗುತ್ತದೆ. ಗೀತೋಪದೇಶ ಪಡೆಯುವ ಸೌಭಾಗ್ಯ ದೊರೆತ ಸಂದರ್ಭದಲ್ಲಿ ಕೂಡ ಅರ್ಜುನ ಕೃಷ್ಣನಲ್ಲಿ ಸಂದೇಹಪಟ್ಟು ಕೇಳಿಯೇ ಬಿಡುತ್ತಾನೆ: ‘ನಿನ್ನ ಜನ್ಮವಾದರೋ ಇತ್ತೀಚಿನದು. ಸೂರ್ಯನ ಜನ್ಮ ಬಹಳ ಪುರಾತನವಾದದ್ದು. ಹಾಗಿರುವಾಗ ಈ ಯೋಗವನ್ನು ನೀನು ಕಲ್ಪದ ಆದಿಯಲ್ಲಿ ಸೂರ್ಯನಿಗೆ ಬೋಧಿಸಿದ್ದೆ ಎಂದು ಹೇಳಿದರೆ ನಂಬುವುದೆಂತು?’ ಅಂದು ಸಂದೇಹದ ಸುಳಿಗೆ ಬಿದ್ದ ಅರ್ಜುನನ ಸ್ಥಿತಿಯನ್ನು ಇಂದು ದೇವರ ‘ವಿಶ್ವಾಸ’ ಹೊಂದಿರುವುದಾಗಿ ಹೇಳಿಕೊಳ್ಳುವ ನಮ್ಮ ಸ್ಥಿತಿಗೆ ಹೋಲಿಸಿದರೆ ವ್ಯತ್ಯಾಸವೇನೂ ಕಾಣದು. ಅರ್ಜುನನಂತೆ ನಾವೂ ಕೃಷ್ಣನ ಭಕ್ತರೇ. ಆದರೂ ವಿಶ್ವಾಸಕ್ಕೆ ಮಾತ್ರ ‘ಸ್ವಲ್ಪ’ ಕೊರತೆ ಅಷ್ಟೆ ….