ಸ್ವಾಮಿ ವಿವೇಕಾನಂದರು ಒಂದೆಡೆ ಹೇಳುತ್ತಾರೆ: ‘ಯಾರಿಗೆ ತಮ್ಮ ಮೇಲೆ ವಿಶ್ವಾಸವಿಲ್ಲವೋ ಅವರೇ ನಿಜವಾದ ಅರ್ಥದಲ್ಲಿ ನಾಸ್ತಿಕರು. ‘ನಿಜಕ್ಕಾದರೆ ವಿಶ್ವಾಸದ ಕೊರತೆ ಇರುವಲ್ಲಿ ಬದುಕು ಅತ್ಯಂತ ಘೋರವಾಗುತ್ತದೆ. ದುರಂತಮಯವಾಗುತ್ತದೆ. ನಮಗೆ ಬೇಕಾದದ್ದು ಅತಿಯಾದ ವಿಶ್ವಾಸ ಅಲ್ಲ; ಸರಿಯಾದ ಆತ್ಮವಿಶ್ವಾಸ! ಆತ್ಮವಿಶ್ವಾಸವನ್ನು ಹೊಂದಿರುವುದೆಂದರೇನು? ಇಂಗ್ಲೀಷಿನಲ್ಲಿ ನಾವಿದನ್ನು ಸೆಲ್ಫ್ ಕಾನ್ಫಡೆನ್ಸ್ ಎನ್ನುತ್ತೇವೆ. ಸೆಲ್ಫ್ ಅಂದರೆ ಆತ್ಮ. ಕಾನ್ಫಿಡೆನ್ಸ್ ಅಂದರೆ ವಿಶ್ವಾಸ. ಆತ್ಮನಲ್ಲಿ ನಮಗಿರುವ ವಿಶ್ವಾಸವೇ ಆತ್ಮವಿಶ್ವಾಸ. ಎಂದರೆ ಪರಮಾತ್ಮನನ್ನು ಪ್ರತಿನಿಧಿಸುವ ಚೈತನ್ಯರೂಪಿಯಾದ ಜೀವಾತ್ಮನು ನಮ್ಮೊಳಗೆ ಇದ್ದಾನೆ ಎನ್ನುವ ಅರಿವು ನಮ್ಮಲ್ಲಿ ಇರಬೇಕು. ಆಗ ಮಾತ್ರವೇ ನಮಗೆ ನಮ್ಮ ಮೇಲೆ ವಿಶ್ವಾಸ ಮೂಡಲು ಸಾಧ್ಯ. ಅದಿದ್ದರೆ ನಮ್ಮ ಶಕ್ತಿ-ಸಾಮರ್ಥ್ಯವನ್ನು ನಾವು ಕೀಳಂದಜಿಸಲಾರೆವು. ಪರಮಾತ್ಮನನ್ನು ಪ್ರತಿನಿಧಿಸುವ ಜೀವಾತ್ಮನು ನಮ್ಮೊಳಗೆ ಇರುವುದರಿಂದಲೇ ನಮ್ಮಲ್ಲಿ ದೈವಿಶಕ್ತಿಯು ಅಂತರ್ಗತವಾಗಿದೆ. ಆ ದೈವೀಶಕ್ತಿಯ ಬಲದಲ್ಲಿ ನಮ್ಮ ಮುಂದಿರುವ ಮಹತ್ಕಾರ್ಯವನ್ನು ಸಾಧಿಸುವುದು ನಮಗೆ ಸುಲಭಸಾಧ್ಯ ಎಂಬ ವಿಶ್ವಾಸ ಇರಬೇಕು. ಆದರೆ ‘ಅವಿಶ್ವಾಸ’ವೆಂಬ ಪರಮ ಶತ್ರು ನಮ್ಮೊಳಗಿನ ದೈವೀ ಶಕ್ತಿಯನ್ನು ನಾವು ಕಂಡುಕೊಳ್ಳದಂತೆ ಅಡ್ಡು ನಿಲ್ಲುತ್ತದೆ. ಹಾಗಾಗಿ ಯಾವುದೇ ಕೆಲಸಕ್ಕೆ ತೊಡಗುವ ಸಮಯದಲ್ಲಿ ಅದು ನಮ್ಮನ್ನು ಅಧೀರಗೊಳಿಸುತ್ತೆ. ನಮ್ಮೊಳಗಿನ ದೈವಬಲವನ್ನು ನಾವು ಪಡೆಯದಂತೆ ಪ್ರಯತ್ನಿಸುತ್ತದೆ. ಹಾಗಾಗಿಯೇ ನಾವು ಅಶಕ್ತರು, ಅಸಹಾಯಕರು, ದುರ್ವಿಧಿಯಿಂದ ಪೀಡಿತರಾದವರು ಎಂಬಿತ್ಯಾದಿ ನೇತ್ಯಾತ್ಮಕ ಅಭಿಪ್ರಾಯಗಳನ್ನೇ ಮೈಗೂಡಿಸಿಕೊಳ್ಳುತ್ತೇವೆ. ಬದುಕಿನಲ್ಲಿ ಯಶಸ್ಸನ್ನು ಸಾಧಿಸಲು ಈ ‘ಅವಿಶ್ವಾಸ’ವೆಂಬ ಪರಮ ಶತ್ರುವನ್ನು ನಾವು ಮೊದಲಾಗಿ ಗೆಲ್ಲುವುದು ಅಗತ್ಯ.