ಪ್ರಕೃತಿಯ ಮಾಯೆಗೆ ಸಿಲುಕಿರುವ ನಮಗೆ ನಮ್ಮೊಳಗಿನ ಅಜ್ಞಾನವೇ ಪರಮ ಶತ್ರುವಾಗಿದೆ ಅಜ್ಞಾನವೆಂದರೆ ನಮ್ಮ ಪೂರ್ವಾಪರದ ಬಗ್ಗೆ ನಮಗೇ ತಿಳವಳಿಕೆ ಇಲ್ಲದಿರುವುದು. ಹುಟ್ಟು ಮತ್ತು ಸಾವಿನ ನಡುವೆ ನಾವು ಅನುಭವಿಸುವ ಬದುಕೇ ನಮಗೆ ಸರ್ವಸ್ವವಾಗಿದೆ. ನಮ್ಮ ದೇಹವೇ ನಮಗೆ ಪರಮ ಸತ್ಯವಾಗಿರುವುದೂ ಇದಕ್ಕೆ ಕಾರಣ. ಹಾಗಾಗಿ ದೇಹದ ಮೇಲೆ ನಾವು ವಿಶೇಷವಾದ ಮಮತೆಯನ್ನು ಮಮಕಾರವನ್ನೂ ಹೊಂದಿದ್ದೇವೆ. ಇಲ್ಲಿ ಹುಟ್ಟಿ ಬರುವ ಮುನ್ನ ನಾನು ಎಲ್ಲಿದ್ದೆ? ಏನಾಗಿದ್ದೆ? ಸತ್ತ ಬಳಿಕ ನಾನು ಎಲ್ಲಿಗೆ ಹೋಗುವೆ? ಏನಾಗುವೆ ಎಂಬಿತ್ಯಾದಿ ಪ್ರಶ್ನೆಗಳಿಗೆ ಉತ್ತರ ನಮ್ಮಲ್ಲಿ ಇಲ್ಲ. ಇದುವೇ ನಮ್ಮ ಮೂಲ ಅಜ್ಞಾನ. ಈ ಅಜ್ಞಾನದ ಫಲವಾಗಿ ನಮಗೆ ನಮ್ಮ ದೈಹಿಕ ಅಸ್ತಿತ್ವವೇ ಪರಮಸತ್ಯವೆಂಬ ಭ್ರಮೆ ಇದೆ. ಪಂಚೇಂದ್ರಿಯಗಳ ಮೂಲಕ ನಾವು ಯಾವ ಅನುಭವವನ್ನು ಪಡೆಯುವೆವೋ ಅವು ಮಾತ್ರವೇ ಪ್ರಮಾಣೀಕೃತವೆಂಬ ಭಾವನೆ ನಮ್ಮದಾಗಿರುವುದರಿಂದ ಉಳಿದವೆಲ್ಲವೂ ಮಿಥ್ಯ. ದೇವರ ಬಗೆಗೂ ನಮ್ಮಲ್ಲಿರುವುದು ಇದೇ ರೀತಿಯ ಅಹಂಕಾರದ ಭಾವ. ನಾವ್ಯಾರೂ ದೇವರನ್ನು ಕಂಡಿಲ್ಲ, ಅಂತಿರುವಾಗ ದೇವರು ಇದ್ದಾನೆಂದರೆ ಎಷ್ಟು ಸತ್ಯ ಎಂಬ ಪ್ರಶ್ನೆ ನಮ್ಮಲ್ಲಿ ಸದಾ ಹೆಡೆ ಎತ್ತುತ್ತಲೇ ಇರುತ್ತದೆ. ಪ್ರಕೃತಿಯ ಮಾಯೆಯಿಂದಾಗಿ ತೀವ್ರ ವಿಭ್ರಮೆಗೆ ಗುರಿಯಾಗಿರುವ ನಮಗೆ ದೇವರ ಅಸ್ತಿತ್ವದ ಪ್ರಶ್ನೆ ಯಾವತ್ತೂ ಒಂದು ಗಂಭೀರ ತಮಾಷೆಯ ವಿಷಯವೇ ಆಗಿದೆ. ಆದರೆ ಅದಕ್ಕೆ ಕಾರಣ ದೇವರಲ್ಲ, ನಾವೇ! ನಮ್ಮನ್ನು ಸದಾ ಕಾಡುವ ಅಜ್ಞಾನವೇ ಇದಕ್ಕೆ ಮುಖ್ಯ ಕಾರಣ. ‘ಭಗವದ್ಗೀತೆಯನ್ನು ಕಲ್ಪದ ಆದಿಯಲ್ಲಿ ನಾನು ಸೂರ್ಯನಿಗೆ ಹೇಳಿದೆನು, ಈಗ ಮತ್ತೆ ನನ್ನ ಭಕ್ತನೂ ಸ್ನೇಹಿತನೂ ಆಗಿರುವ ನಿನಗೆ ಹೇಳುವೆನು’ ಎಂದು ಕೃಷ್ಣನು ಕುರುಕ್ಷೇತ್ರದಲ್ಲಿ ಹೇಳಿದಾಗ ಅರ್ಜುನನನ್ನು ಕಾಡುವ ಮಾನವ ಸಹಜ ‘ಸಂದೇಹ’ ನಮ್ಮೆಲ್ಲರೊಳಗೂ ಇರುವ ಅಜ್ಞಾನದ ಫಲವೇ ಆಗಿದೆ.
ಅಜ್ಞಾನದ ಫಲ
151
previous post