ದೇವರ ಅಸ್ತಿತ್ವವು ನಮಗೆ ಸದಾ ಪ್ರಶ್ನೆಯಾಗಿ ಕಾಡಲು ಮುಖ್ಯವಾದ ಕಾರಣವೆಂದರೆ ನಮಗೆ ದೇವರು ಏಕೆ ಬೇಕು ಎಂಬ ಪ್ರಶ್ನೆಗೆ ನಮ್ಮಲ್ಲಿ ಉತ್ತರವೇ ಇಲ್ಲದಿರುವುದು. ದೇವರನ್ನು ನಾವು ಯಾರು ನೋಡಿಲ್ಲ, ಆತನು ಇದ್ದಾನೋ ಇಲ್ಲವೋ ಎನ್ನುವುದಕ್ಕೆ ಯಾವುದೇ ಪುರಾವೆ ಇಲ್ಲ. ಹಾಗಿರುವಾಗ ನಮ್ಮ ಕಷ್ಟಕಾಲಕ್ಕೆ ಆತನಿಂದ ಸಹಾಯ ದೊರಕಬೇಕೆಂದಾಗ ಅದು ಸಿಕ್ಕೀತು ಎನ್ನುವುದಕ್ಕೆ ಏನು ಗ್ಯಾರಂಟಿ? ಐಹಿಕ ಪ್ರಪಂಚದ ಸುಖಭೋಗಗಳೇ ನಮಗೆ ನಿಜವಾದ ಸುಖವಾಗಿರುವಾಗ ದೇವರಿಂದ ಸಿಗಬಹುದಾದ ಸುಖ–ಸಂತೋಷ ಬೇರೆಯೇ ಇದ್ದಿತೇ? ಇದ್ದರೂ ಅದು ಇದಕ್ಕಿಂತ ರುಚಿಯಾಗಿ ಇದ್ದೀತೇ? ಇದು ನಮ್ಮನ್ನು ನಿತ್ಯ ಕಾಡುವ ಪ್ರಶ್ನೆ. ಆದರೆ ನಾವು ತಿಳಿಯಬೇಕಾದ ಸತ್ಯ ಬೇರೆಯೇ ಇದೆ. ಅದೆಂದರೆ ದೇಹಕ್ಕೆ ಸಿಗುವ ಸುಖ ಕ್ಷಣಿಕ. ಮನಸ್ಸಿಗೆ ಸಿಗುವ ಸಂತೋಷ ಅದಕ್ಕಿಂತ ಹೆಚ್ಚಿನದು; ಆತ್ಮಕ್ಕೆ ಸಿಗುವ ಆನಂದ ಎಲ್ಲಕ್ಕಿಂತ ಮಿಗಿಲಾದುದು. ಆದರೆ ಕೇವಲ ಮನುಷ್ಯರು ಇಂದ್ರಿಯ ಸುಖಭೋಗದ ಹಂತದಲ್ಲೇ ಉಳಿದು ಬಿಡುತ್ತಾರೆ. ಮಾತ್ರವಲ್ಲ ಅವರ ಬದುಕು ಕೂಡ ಹಾಗೆಯೇ ಕೊನೆಗೊಳ್ಳುತ್ತದೆ. ಬದುಕಿನ ಉದ್ದಕ್ಕೂ ಕಾಮನೆಗಳ ಗುಲಾಮರಾಗಿ, ಅವುಗಳ ಆರಾಧಕರಾಗಿ, ಅಗಣಿತ ಅತೃಪ್ತ ಆಸೆಗಳನ್ನು ಒಡಲಲ್ಲಿ ಬಚ್ಚಿಟ್ಟುಕೊಂಡೇ ಇಹಲೋಕವನ್ನು ತ್ಯಜಿಸುತ್ತಾರೆ. ಅತೃಪ್ತ ಕಾಮನೆಗಳ ಈಡೇರಿಕೆಗಾಗಿ ಮತ್ತೆ ಜನುಮಿಸುವ ಪ್ರಾರಬ್ಧಕ್ಕೆ ಗುರಿಯಾಗುತ್ತಾರೆ ಕರ್ಮಬಂಧನದ ದೆಸಿಯಿಂದ ನಿರಂತರ ಹುಟ್ಟು–ಸಾವಿನ ಆವರ್ತನಕ್ಕೆ ಗುರಿಯಾಗುವ ಮನುಜನಿಗೆ ಮೋಕ್ಷದ ಹಾದಿ ಕಾಣಲುಂಟೆ? ಐಹಿಕ ಸುಖಭೋಗಗಳೇ ಪ್ರಧಾನವಾಗಿರುವ ಮನುಜರಿಗೆ ದೇವರ ಅಸ್ತಿತ್ವದ ಬಗ್ಗೆ ಯಾವತ್ತೂ ಶಂಕೆಯೇ, ಅಂತಹವರಿಗಾಗಿಯೇ ಶ್ರೀ ಕೃಷ್ಣ ಗೀತೆಯಲ್ಲಿ ಹೇಳುತ್ತಾನೆ: ‘ಯಾರು ನನ್ನನ್ನು ಯಥಾರ್ಥವಾಗಿ ತಿಳಿದುಕೊಂಡಿಲ್ಲವೊ ಅವರು ಈ ಮಾನವ ಲೋಕದಲ್ಲಿ ಕರ್ಮಗಳ ಫಲವನ್ನು ಬಯಸುತ್ತಲೇ ಇರುತ್ತಾರೆ. ಹಾಗಾಗಿ ಅವರು ನಿರಂತರ ಕರ್ಮಬಂಧನಕ್ಕೆ ಗುರಿಯಾಗುತ್ತಾರೆ. ಹುಟ್ಟು–ಸಾವಿನ ಚಕ್ರದಲ್ಲಿ ಸಿಲುಕಿಕೊಳ್ಳುತ್ತಾರೆ’.
ಅಸ್ತಿತ್ವದ ಪ್ರಶ್ನೆ
105
previous post