ದೇವರು ಪ್ರತಿಯೊಬ್ಬರ ಹೃದಯದಲ್ಲೂ ನೆಲೆಸಿದ್ದಾನೆ ಎನ್ನುವುದು ಸತ್ಯ. ಆದರೆ ನಾವು ಆತನನ್ನು ಕಾಣಲಾರೆವು ಎನ್ನುವ ಕಾರಣಕ್ಕೆ ದೇವರೇ ಇಲ್ಲ ಎನ್ನುವುದು ಸರಿಯಲ್ಲ. ದೇವರನ್ನು ನಾವು ಎಲ್ಲಿ ಬಯಸುವೆವೋ ಅಲ್ಲಿ ಕಾಣಲು ಸಾಧ್ಯ ಎನ್ನುವುದನ್ನೂ ಅನೇಕ ಉದಾಹರಣೆಗಳಿಂದ ತಿಳಿಯಬಹುದು. ಅದನ್ನು ದೇವರೇ ಶ್ರುತಪಡಿಸಿದ್ದಾನೆ. ‘ನೀನು ಏನನ್ನು ನನ್ನಲ್ಲಿ ಬೇಡುವೆಯೋ ಅದನ್ನೇ ನಿನಗೆ ಅನುಗ್ರಹಿಸುತ್ತೇನೆ. ಆದರೆ ನನ್ನನ್ನೇ ಬೇಡಿದರೆ ನಿನಗೆ ನನ್ನ ಸಾನಿಧ್ಯ ನಿಶ್ಚಿತವಾಗಿಯೂ ಪ್ರಾಪ್ತವಾಗುವುದು. ಅದರ ಬಗ್ಗೆ ನಿನಗೆ ಸಂದೇಹವೆ ಬೇಡ’ ಎಂಬ ವಿಚಾರವನ್ನು ಗೀತೆಯಲ್ಲಿ ಶ್ರೀಕೃಷ್ಣ ಸ್ಪಷ್ಟಪಡಿಸುತ್ತಾನೆ. ಪ್ರಾಪಂಚಿಕ ಸುಖಭೋಗ, ಐಶ್ವರ್ಯ, ಕೀರ್ತಿ, ಅಂತಸ್ತು, ಅಧಿಕಾರ ಇತ್ಯಾದಿಗಳನ್ನು ಕರುಣಿಸಲು ದೇವರ ಅವಿಭಾಜ್ಯ ಅಂಗಗಳಾಗಿ ಸಹಸ್ರಾರು ಅಧಿದೇವತೆಗಳಿದ್ದಾರೆ. ಅವರನ್ನು ಒಲಿಸಿಕೊಳ್ಳಲು ಹೋಮ-ಹವನ, ಯಾಗ-ಯಜ್ಞಾದಿಗಳನ್ನು ಮಾಡಬಹುದಾಗಿದೆ. ಹಾಗೆ ಮಾಡುವ ಮೂಲಕ ಲೌಕಿಕ ಸುಖಭೋಗಗಳು ನಿಶ್ಚಿತವಾಗಿಯೂ ಪ್ರಾಪ್ತವಾಗುವವು ಮಾತ್ರವಲ್ಲ ಈ ಕಲಿಯುಗದಲ್ಲಂತೂ ಅವು ಕ್ಷಿಪ್ರವಾಗಿ ಅನುಗ್ರಹಿಸಲ್ಪಡುವುವು. ಆದರೆ ಹಾಗೆ ಕೆಳಸ್ತರದ ದೇವ-ದೇವತೆಗಳನ್ನು ಒಲಿಸಿಕೊಂಡು ಪಡೆಯಬಹುದಾದ ಲೌಕಿಕ ಸುಖ ಭೋಗಗಳೆಲ್ಲವೂ ತಾತ್ಕಾಲಿಕವಾದವುಗಳು. ‘ಈ ಮಾನವ ಲೋಕದಲ್ಲಿ ನನ್ನನ್ನು ಯಾರು ಯಥಾರ್ಥವಾಗಿ ತಿಳಿದುಕೊಂಡಿಲ್ಲವೋ ಅವರು ಕರ್ಮಗಳ ಫಲವನ್ನು ಬಯಸುತ್ತಾ ದೇವ-ದೇವತೆಗಳನ್ನು ಆರಾಧಿಸುತ್ತಾರೆ. ಅವರ ಕರ್ಮಗಳಿಗೆ ಉತ್ಪತ್ತಿಯಾದ ಸಿದ್ಧಿಯೂ ಅವರಿಗೆ ಬೇಗನೆ ಲಭಿಸುತ್ತದೆ. ಆದರೆ ಅವರಿಗೆ ನನ್ನ ಸಾಕ್ಷಾತ್ಕಾರ ಪ್ರಾಪ್ತವಾಗುವುದಿಲ್ಲ. ಆದುದರಿಂದ ಸಚ್ಚಿದಾನಂದದ ಪ್ರಾಪ್ತಿಗಾಗಿ ನೀನು ನನ್ನನ್ನೇ ಪಡೆಯಬೇಕೆಂಬ ಏಕೈಕ ಹಂಬಲವನ್ನು ಹೊಂದು. ಆ ಹಂಬಲದಲ್ಲೇ ನಿನಗೆ ಮೋಕ್ಷದ ಹಾದಿಯು ಸುಗಮವಾಗುವುದು’ ಎಂಬ ಇಂಗಿತವನ್ನು ಶ್ರೀಕೃಷ್ಣ ಅರ್ಜುನನಿಗೆ ತಿಳಿಸುತ್ತಾನೆ. ದೇವರಲ್ಲಿ ನಾವು ಲೌಕಿಕ ಸುಖಭೊಗಗಳ ಬೇಡಿಕೆಯನ್ನು ನಿವೇದಿಸುವುದು ಅದೆಷ್ಟು ಅರ್ಥಹೀನ ಎನ್ನುವುದು ಇಲ್ಲಿ ಸುಸ್ಪಷ್ಟ.