ದೇವರ ಮೇಲಿನ ಪ್ರೀತಿ ನಿಷ್ಕಳಂಕವಾಗಿರುವಷ್ಟೂ ಅದರಿಂದ ಸಿಗುವ ಆತ್ಮಾನಂದ ಅಪೂರ್ವವಾದದ್ದು. ಪ್ರೀತಿ ನಿಷ್ಕಳಂಕವಾಗಿರಬೇಕಾದರೆ ಅದರಲ್ಲಿ ಸಾಸಿವೆ ಕಾಳಿನಷ್ಟು ಕೂಡ ಸ್ವಾರ್ಥ, ಸಂದೇಹವಿರಬಾರದು. ಸಂದೇಹ ಉತ್ಪನ್ನವಾಗುವಲ್ಲಿ ಮೂಲಭೂತವಾಗಿ ಅಂತರ್ಗತವಾಗಿರುವುದು ಸ್ವಾರ್ಥವಲ್ಲದೆ ಬೇರೇನೂ ಅಲ್ಲ. ಆದುದರಿಂದ ನಿಸ್ವಾರ್ಥ ಪ್ರೇಮವೇ ನಿಷ್ಕಳಂಕ ಪ್ರೇಮ. ಇಂತಹ ನಿಷ್ಕಳಂಕ ಪ್ರೇಮ ಯಾರಲ್ಲಿ ಇರುವುದೋ ಅವರು ತಾವು ಪ್ರೇಮಿಸುವ ವ್ಯಕ್ತಿ ಅಥವಾ ವಸ್ತುವನ್ನು ತಮ್ಮೊಳಗೇ ಕಾಣುವರು. ಗೋಕುಲದಲ್ಲಿ ಗೋಪಿಯರಿಗೆ ತಾವು ತೀವ್ರವಾಗಿ ಪ್ರೀತಿಸುತ್ತಿದ್ದ ಶ್ರೀ ಕೃಷ್ಣನನ್ನು ತಮ್ಮೊಳಗೇ ಕಾಣುವುದು ಸಾಧ್ಯವಿತ್ತು. ರಾಸಲೀಲೆಯ ಸಂದರ್ಭದಲ್ಲಿ ಪ್ರತಿಯೊಬ್ಬ ಗೋಪಿಗೆ ಶ್ರೀಕೃಷ್ಣ ತನ್ನ ಜತೆಗೆಯೇ ನರ್ತಿಸುತ್ತಿರುವ ಅನುಭವವಾಗುತ್ತಿತ್ತು. ಆ ನರ್ತನದ ಗಾಢತೆಯಲ್ಲಿ ಒಮ್ಮೊಮ್ಮೆ ತಾವೇ ಶ್ರೀ ಕೃಷ್ಣನೆಂಬ ಭಾವನೆಯೂ ಅವರಲ್ಲಿ ಉತ್ಪನ್ನವಾಗುತ್ತಿತ್ತು. ಗೀತೆಯಲ್ಲಿ ಶ್ರೀಕೃಷ್ಣ ಒಂದೆಡೆ ಹೇಳುತ್ತಾನೆ: ‘ಆಸಕ್ತಿ, ಭಯ, ಕ್ರೋಧಗಳಿಲ್ಲದೆ ಅನನ್ಯ ಭಾವದಿಂದ ನನ್ನಲ್ಲಿಯೇ ದೃಢವಾದ ಮನಸ್ಸುಳ್ಳವರಾಗಿ ನನಗೆ ಶರಣಾಗತರಾದ ಅನೇಕ ಪುರುಷರು ಜ್ಞಾನರೂಪಿ ತಪಸ್ಸಿನಿಂದ ಪವಿತ್ರರಾಗಿ ನನ್ನ ಭಾವರೂಪವನ್ನು ಪಡೆದುಕೊಂಡಿದ್ದಾರೆ. ಆದುದರಿಂದ, ಅರ್ಜುನ, ನೀನು ನನ್ನನ್ನಲ್ಲದೆ ಬೇರೇನನ್ನೂ ಅಪೇಕ್ಷ ಪಡದೆ ಸಂಪೂರ್ಣವಾಗಿ ನನಗೆ ಶರಣು ಬಾ. ‘ನಮ್ಮ ದೈನಂದಿನ ಬದುಕಿನಲ್ಲಿ ನಮ್ಮ ಸರ್ವ ವ್ಯವಹರಗಳೂ ಸ್ವಂತದ ಪ್ರಯೋಜನ ದೃಷ್ಟಿಯನ್ನು ಹೊಂದಿರುವುದರಿಂದ ನಮಗೆ ಸ್ವಾರ್ಥ ಮತ್ತು ಸಂದೇಹಗಳಿಲ್ಲವೆ ವ್ಯವಹರಿಸುವುದೇ ತಿಳಿಯದು. ಹಾಗಾಗಿ ನಿಷ್ಕಳಂಕ ಪ್ರೇಮವೆನ್ನುವುದು ನಮ್ಮ ಅರಿವಿಗೆ ನಿಲುಕದ ಸಂಗತಿ! ಹೀಗಿರುವಾಗ ದೇವರೊಂದಿಗೆ ನಮ್ಮ ಪ್ರೇಮ ನಿಷ್ಕಳಂಕವಾಗಿರಲು ಹೇಗೆ ಸಾಧ್ಯ?