Home » ಸಿರಿವಂತಿಕೆ
 

ಸಿರಿವಂತಿಕೆ

by Kundapur Xpress
Spread the love

ಭಕ್ತಿ ಮತ್ತು ಪ್ರೀತಿಯ ಮೂಲಕ ನಾವು ದೇವರಿಗೆ ಹತ್ತಿರವಾಗುವುದೇ ಬದುಕಿನ ಗುರಿಯಾಗಿರಬೇಕು. ಏಕೆಂದರೆ ಭಕ್ತಿ ಮತ್ತು ಪ್ರೀತಿಯೇ ಯಶಸ್ವಿ ಬದುಕಿನ ಸುಲಭ ಸಾಧನಗಳು. ಸಂತ ತುಳಸೀದಾಸರು, ಕಬೀರರು, ಚೈತನ್ಯ ಮಹಾಸ್ವಾಮಿಗಳು, ಸಂತ ತುಕಾರಾಮರು, ಭಕ್ತ ಕನಕದಾಸರು, ಪುರಂದರದಾಸರು ಈ ಸತ್ಯವನ್ನೇ ಸಾರಿ ಹೇಳಿರುವರಲ್ಲದೆ ಜನಮನದಲ್ಲಿ ಭಕ್ತಿಯ ಸೆಲೆಯನ್ನು ತುಂಬಿ ಎಲ್ಲರನ್ನೂ ದೇವತ್ವಕ್ಕೆ ಏರಿಸುವ ಪುಣ್ಯಕಾರ್ಯವನ್ನು ಮಾಡಿರುವರು. ನಿಷ್ಕಳಂಕವಾದ ಪ್ರೇಮ ಭಾವ ಇರುವಲ್ಲಿ ಸ್ವಾರ್ಥಕ್ಕೆ ಸ್ಥಾನವಿಲ್ಲ. ಸ್ವಾರ್ಥಪರತೆಯನ್ನು ಸಂಪೂರ್ಣವಾಗಿ ಹೊಡೆದೋಡಿಸದೆ ನಿಷ್ಕಲ್ಮಶವಾಸ ಪ್ರೇಮವಾಗಲೀ ಭಕ್ತಿಯಾಗಲೀ ಜಾಗೃತವಾಗುವುದಿಲ್ಲ. ಧನಕನಗಳಿಲ್ಲದ ಕಾರಣಕ್ಕೆ ತಾವು ಬಡವರೆಂಬ ಕೀಳರಿಮೆ ಹೊಂದಿರುವವರು ಅಸಂಖ್ಯ. ವಿಚಿತ್ರವೆಂದರೆ ಸಿರಿವಂತರೆನಿಸಿಕೊಂಡ ಅನೇಕರು ತಮಗಿಂತ ಸಿರಿವಂತರಿರುವ ಇತರರೊಡನೆ ತಮ್ಮನ್ನು ಹೋಲಿಸಿಕೊಂಡು ತಾವು ಬಡವರೆಂಬ ಭಾವನೆಯನ್ನೇ ಮನದಾಳದಲ್ಲಿ ಬೆಳೆಸಿಕೊಂಡಿರುತ್ತಾರೆ. ಆದುದರಿಂದ ಬಡತನ ಮತ್ತು ಸಿರಿವಂತಿಕೆ ಎನ್ನುವುದು ನಮ್ಮ ನಮ್ಮ ಆಲೋಚನಾ ಕ್ರಮದಲ್ಲಿ ಇದೆಯೇ ವಿನಾ ಧನಕನಕಗಳಲ್ಲಿ ಇಲ್ಲ. ಅದೇನಿದ್ದರೂ ದೇವರ ಮುಂದೆ ವ್ಯಕ್ತವಾಗುವ ಸಿರಿತನ ಧನಕನಕದ್ದಲ್ಲ. ಪ್ರೀತಿ, ಪ್ರೇಮ, ಭಕ್ತಿಭಾವಗಳ ಸಿರತನವೇ ದೇವರಿಗೆ ಮುಖ್ಯವಾಗುವುದು. ದೇವರು ಕರುಣಿಸಿರುವಷ್ಟು ಸೌಭಾಗ್ಯದಲ್ಲಿ ತೃಪ್ತಿಯನ್ನು ಕಾಣುತ್ತಾ ‘ಸಾಕು, ಸಾಕು’ ಎನ್ನುವವನೇ ನಿಜವಾದ ಅರ್ಥದಲ್ಲಿ ಸಿರಿವಂತ; ದೇವರು ಕರುಣಿಸಿದಷ್ಟೂ ಸಾಲದೆ, ಸಂತೃಪ್ತಿಯನ್ನು ಕಾಣದೆ, ‘ಇನ್ನೂ ಬೇಕು, ಮತ್ತಷ್ಟು ಬೇಕು, ಒಡನೆಯೇ ದಯಪಾಲಿಸು’ ಎಂದು ಗೋಗರೆಯುವವನೇ ಬಡವ. ಇನ್ನೂ ಬೇಕು ಎನ್ನುವವನಿಗೆ ಐಹಿಕ ಸುಖ ಭೋಗಗಳ ಬಯಕೆಯೇ ವಿನಾ ದೇವರ ಸಾನಿಧ್ಯವನ್ನು ಪಡೆಯುವ ಹಂಬಲವಿರುವುದಿಲ್ಲ. ಹಾಗಾಗಿಯೇ ಆತ ನಿರಂತರ ದುಃಖಿ; ಹುಟ್ಟು-ಸಾವಿನ ಚಕ್ರಕ್ಕೆ ಸಿಲುಕಿಕೊಂಡಿರುವ ಕ್ಷುಧ್ರಜೀವಿ!

   

Related Articles

error: Content is protected !!