ಭಕ್ತಿಯನ್ನು ಮೈಗೂಡಿಸಿಕೊಳ್ಳುವ ನಿಟ್ಟಿನಲ್ಲಿ ನಾವು ಮೊತ್ತ ಮೊದಲಾಗಿ ಮಾಡಬೇಕಾದದ್ದು ಏನು? ಸ್ವಾಮಿ ವಿವೇಕಾನಂದರು ಹೇಳುತ್ತಾರೆ: ‘ಮೊತ್ತ ಮೊದಲಾಗಿ ದುಸ್ಸಂಗವನ್ನು ತ್ಯಜಿಸಿ. ನಿಮ್ಮ ಮನಸ್ಸನ್ನು, ಚಂಚಲಗೊಳಿಸುವ ಪ್ರಾಪಂಚಿಕ ಸಂಗದಿಂದ ದೂರವಿರಿ. ನಾನು, ನನ್ನದು ಎಂಬುದನ್ನೆಲ್ಲ ತ್ಯಜಿಸಿ. ಪ್ರಪಂಚದಲ್ಲಿ ಯಾರಿಗೆ ಮತ್ತಾರೂ ಇಲ್ಲವೊ ಅವನ ನೆರವಿಗೆ ಭಗವಂತನು ಬರುತ್ತಾನೆ.’ ಗೀತೆಯಲ್ಲಿ ಶ್ರೀ ಕೃಷ್ಣನು ಕೂಡ ನಮ್ಮನ್ನು ಇದೇ ವಿಷಯದಲ್ಲಿ ಎಚ್ಚರಿಸುತ್ತಾನೆ: ಯಾರು ಸಂಸಾರದ ಸಂಬಂಧವಿಲ್ಲದೆ ಸದಾ ಪರಮಾನಂದ ಪರಮಾತ್ಮನಲ್ಲೇ ನಿತ್ಯತೃಪ್ತನಾಗಿರುವನೋ, ಕರ್ಮಫಲದಲ್ಲಿ ಆಸೆಯನ್ನು ಇರಿಸದೆ ಕರ್ತವ್ಯಬದ್ಧನಾಗಿ ಕರ್ಮಗಳನ್ನು ನಿರ್ವಹಿಸುವನೋ ಅವನು ಮಾತ್ರವೇ ಬಂಧಮುಕ್ತನಾಗಿ ನನ್ನನ್ನೇ ಸೇರುವನು.’ ದೇವರ ಮೇಲೆ ಭಕ್ತಿ ಉಂಟಾಗಲು ಕರ್ಮಫಲದ ತ್ಯಾಗ ಅತ್ಯವಶ್ಯ. ಲೌಕಿಕ ಬಂಧನಗಳನ್ನೆಲ್ಲ ಕಿತ್ತೆಸೆದು ದೇವರೆಡೆಗೆ ಸಾಗುವುದು ಅಗತ್ಯ. ಅಂತೆಯೇ ಸ್ವಾಮಿ ವಿವೇಕಾನಂದರು ಹೇಳುತ್ತಾರೆ: ‘ಪ್ರಾಪಂಚಿಕ ವ್ಯಾಮೋಹದ ಬಂಧನವನ್ನೆಲ್ಲ ತುಂಡಿರಿಸಿ. ಎಲ್ಲ ಸೋಮಾರಿತನದಿಂದ ಪಾರಾಗಿ. ನೀವು ಮಾಡಿದುದರ ಫಲವನ್ನು ತಿರುಗಿಯೂ ನೋಡಬೇಡಿ. ಎಲ್ಲವನ್ನೂ ಭಗವಂತನಿಗಾಗಿ ಅರ್ಪಿಸಿ. ಆಗಲೇ ನಮ್ಮ ಹೃದಯದಲ್ಲಿ ಅನಂತವಾದ ಪ್ರೇಮದ ಅಪೂರ್ವ ಆನಂದ ಅನುಭವವಾಗುವುದು, ನಮ್ಮ ಭಗವಂತನೆಡೆಗೆ ಅವಿಚ್ಛಿನ್ನವಾಗಿ ಹರಿಯುವುದು.’ ನಿಷ್ಕಳಂಕವಾದ ಪ್ರೀತಿಯು ಯಾವುದೇ ಬಗೆಯ ಪ್ರತಿಫಲವನ್ನೂ ನಿರೀಕ್ಷಿಸುವುದಿಲ್ಲ. ಅಂತೆಯೇ ನಾವು ಭಗವಂತನ ಮೇಲಿರಿಸುವ ಪ್ರೀತಿ ಕೂಡ. ಒಂದೊಮ್ಮೆ ಪ್ರತಿಫಲವನ್ನು ಪ್ರೀತಿಯು ಅಪೇಕ್ಷಿಸಿದ್ದೇ ಆದಲ್ಲಿ ಅದು ಸ್ವಾರ್ಥಪರವಾದ ಪ್ರೀತಿ ಆದೀತೇ ವಿನಾ ನಿಷ್ಕಳಂಕ ಪ್ರೀತಿ ಅಲ್ಲ. ಸ್ವಾರ್ಥದಲ್ಲಿ ಇರುವುದು ಭೋಗದ ಅಪೇಕ್ಷೆಯೇ ಹೊರತು ತ್ಯಾಗದ ಭಾವನೆ ಅಲ್ಲ.