ಬದುಕಿನಲ್ಲಿ ನಾವು ಪಾಠ ಕಲಿಯುವುದು ನಮ್ಮ ತಪ್ಪುಗಳಿಂದಲೇ. ಇತರರು ತಮ್ಮ ಬದುಕಿನಲ್ಲಿ ಮಾಡುವ ತಪ್ಪುಗಳು ನಮಗೆ ಎಚ್ಚರಿಕೆಯ ಸೂಚನೆಗಳನ್ನು ಮಾತ್ರವೇ ಕೊಡುತ್ತವೆ. ಆದರೆ ಅವುಗಳನ್ನು ಲೆಕ್ಕಿಸದೆ ನಾವು ಭಂಡ ಧೈರ್ಯದಲ್ಲಿ ಮುನ್ನುಗ್ಗುತ್ತೇವೆ. ನಿಜಕ್ಕಾದರೆ ಇತರರನ್ನು ನೋಡಿ ನಗುವವನು ಮೂರ್ಖ; ತನ್ನನ್ನು ನೋಡಿ ನಗುವವನು ಜ್ಞಾನಿ! ತಪ್ಪುಗಳಿಂದ ಉಂಟಾಗುವ ದುಷ್ಪರಿಣಾಮಗಳನ್ನು ಖುದ್ದಾಗಿ ಅನುಭವಿಸಿದ ಬಳಿಕವೇ ನಮ್ಮಲ್ಲಿ ವಿವೇಚನೆ ಮೂಡಲು ಸಾಧ್ಯ. ಭೌತಿಕ ಪ್ರಪಂಚದಲ್ಲಿ ಬದುಕುತ್ತಿರುವ ನಮಗೆ ಇಂದ್ರಿಯಾನುಭವವೇ ಪ್ರಮಾಣವಾಗಿರುವುದರಿಂದ ಖುದ್ದಾಗಿ ಅನುಭವಿಸದ ಯಾವ ಸಂಗತಿಗಳೂ ನಮ್ಮ ‘ಪ್ರಾಪಂಚಿಕ ಜ್ಞಾನ’ವನ್ನು ಹೆಚ್ಚಿಸುವುದಿಲ್ಲ. ಅದಕ್ಕೆಂದೇ ಹಿರಿಯರು ಹೇಳುವ ಮಾತು ಹೀಗಿದೆ: ‘ತಾನು ಸಾಯಬೇಕು; ಸ್ವರ್ಗ ಪಡೆಯಬೇಕು.’ ಅತಿಯಾದ ವಿಶ್ವಾಸ, ಅಹಂಕಾರ, ಅಸಂಭಾವ, ಸ್ವಾರ್ಥಪರತೆಯಿಂದಾಗಿ ವಿವೇಚನೆ ಇಲ್ಲದೆ ದುಡುಕುವ ಮೂಲಕ ಬದುಕಿನ ಸುಖ-ಸಂತೋಷ, ಸೌಭಾಗ್ಯಗಳನ್ನು ನಷ್ಟಮಾಡಿಕೊಂಡು ಅನಂತರ ಅವುಗಳನ್ನು ಮರಳಿ ಪಡೆಯಲು ದೇವರನ್ನು ನೆನೆಯುವ ನಾವು ಎಷ್ಟರಮಟ್ಟಿಗೆ ದೇವರಲ್ಲಿ ಶ್ರದ್ಧಾ ಭಕ್ತಿಯನ್ನು ಹೊಂದಿರಲು ಸಾಧ್ಯ? ಇಂತಹ ಸ್ಥಿತಿಯಲ್ಲಿ ನಿಜಕ್ಕೂ ನಾವು ದೇವರಲ್ಲಿ ಪ್ರಾರ್ಥಿಸಬೇಕಾದದ್ದು ಏನನ್ನು? ಕಳೆದುಕೊಂಡ ಸುಖ-ಸೌಭಾಗ್ಯಗಳನ್ನು ಮರಳಿ ಅನುಗ್ರಹಿಸಬೇಕೆಂದೇ? ಅಥವಾ ಸುಖಲೋಪತೆಯಲ್ಲಿ ಮರೆತೇ ಹೋಗಿದ್ದ ದೇವರನ್ನು ಮತ್ತೆ ಶ್ರದ್ಧಾಭಕ್ತಿಯಿಂದ ನೆನೆಯಲು ಆ ದೇವರೇ ಅವಕಾಶ ಮಾಡಿ ಕೊಟ್ಟಿದ್ದಕ್ಕಾಗಿ ಆತನಿಗೆ ಕೃತಜ್ಞತೆ ಅರ್ಪಿಸಲೆಂದೇ? ಬದುಕಿನಲ್ಲಿ ಕಳೆದುಕೊಂಡ ಸುಖ-ಸೌಭಾಗ್ಯಗಳನ್ನು ಮರಳಿ ಅನುಗ್ರಹಿಸಬೇಕೆಂಬ ಪ್ರಾರ್ಥನೆಯಲ್ಲಿ ಅಂತರ್ಗತವಾಗಿರುವುದು ಸ್ವಾರ್ಥವಲ್ಲದೆ ಬೇರೇನೂ ಅಲ್ಲ; ಆ ಸ್ವಾರ್ಥ ಮತ್ತೆ ನಮ್ಮನ್ನು ಐಹಿಕ ಪ್ರಪಂಚಕ್ಕೆ ಬಂಧಿಸುವ ಹುನ್ನಾರವನ್ನೇ ಹೊಂದಿದೆ.