ಭ್ರಮೆಗಳಿಂದ ಹೊರಬಂದು ವಾಸ್ತವಕ್ಕೆ ಇಳಿಯದೆ ನಮ್ಮನ್ನು ನಾವು ಅರಿಯಲಾರೆವು. ಇಂಗ್ಲಿಷಿನಲ್ಲಿ ‘ಡೌನ್ ಟು ಅರ್ತ್’ ಎಂಬ ಮಾತಿನ ಅರ್ಥವೇ ಇದು. ಯುದ್ಧಸನ್ನದ್ಧನಾಗಿ ಕುರುಕ್ಷೇತ್ರಕ್ಕಿಳಿದ ಅರ್ಜುನ ಕೂಡ ಮೊದಲು ‘ಡೌನ್ ಟು ಅರ್ತ್’ ಆಗಿರಲಿಲ್ಲ. ನಮ್ಮೆಲ್ಲರ ಹಾಗೆ ಆತನಲ್ಲೂ ಅತಿಯಾದ ಉತ್ಸಾಹ, ಉದ್ವೇಗವೇ ತುಂಬಿತ್ತು. ತ್ರಿಲೋಕ ವೀರನಾದ ಆತನಲ್ಲಿ ಕುರುಕ್ಷೇತ್ರ ಯುದ್ಧಕ್ಕೆ ಕೊಂಚ ಮುನ್ನ ಎಲ್ಲಕ್ಕಿಂತ ಮುಖ್ಯವಾಗಿ ಇದ್ದ ಭಾವ ಯಾವುದು? ಪ್ರತಿಕಾರ! ಸೇಡು ತೀರಿಸಿಕೊಳ್ಳುವ ಛಲ. ಧರ್ಮದ ಹಾದಿಯಲ್ಲೇ ಸಾಗಿಬಂದ ಪಾಂಡು ಪುತ್ರರಿಗೆ ‘ಧರ್ಮ-ಅಧರ್ಮ’ಗಳ ಕುರಿತು ಚಿಂತನೆ ನಡೆಸುವ ಪ್ರಶ್ನೆಯೇ ಇರಲಿಲ್ಲ. ‘ಈ ಕುರುಕ್ಷೇತ್ರದಲ್ಲಿ ನಾನು ಯರ‍್ಯಾರನ್ನೆಲ್ಲ ಎದುರಿಸಲಿಕ್ಕಿದೆ? ನನ್ನ ವಿರುದ್ಧ ಕಾದಾಡಲು ಯಾರೆಲ್ಲ ಬಂದಿದ್ದಾರೆ?’ ಎಂದು ತಿಳಿಯುವ ಕುತೂಹಲದಲ್ಲಿ ಅರ್ಜುನನು ತನ್ನ ಸಾರಥಿಯಾದ ಶ್ರೀ ಕೃಷ್ಣನಿಗೆ ರಥವನ್ನು ಉಭಯ ಸೇನೆಗಳ ನಡುವೆ ಕೊಂಡೊಯ್ದು ನಿಲ್ಲಿಸಲು ಸೂಚಿಸುತ್ತಾನೆ. ಆಗ ಅರ್ಜುನನ ಮನೋಸ್ಥಿತಿ ಹೇಗಿತ್ತು ಎಂದರೆ ‘ನಾನೇ ಈ ಯುದ್ಧದ ನಿಯಾಮಕ’ ಎಂಬ ಭ್ರಾಂತಿಗೆ ಈಡಾಗಿತ್ತು. ಅದನ್ನು ಸೂಕ್ಷ್ಮವಾಗಿ ಅರಿತ ಶ್ರೀಕೃಷ್ಣನು ಅರ್ಜುನನಲ್ಲಿ ವಿವೇಕೋದಯ ಉಂಟುಮಾಡಲು ಬಯಸಿದನು. ಆದುದರಿಂದಲೇ ಅರ್ಜುನನ ರಥವನ್ನು ದುರ್ಯೋಧನನ ರಥದ ಮುಂದೆ ತಂದಿರಿಸಲಿಲ್ಲ. ಯಾಕೆಂದರೆ ಆ ಸ್ಥಿತಿಯಲ್ಲಿ ದುರ್ಯೋಧನನ್ನು ಕಂಡಾಕ್ಷಣವೇ ಅರ್ಜುನನಲ್ಲಿ ಜ್ವಾಲಾಮುಖಿ ಭುಗಿಲೇಳುತ್ತದೆ ಎಂಬ ವಿಚಾರ ಕೃಷ್ಣನಿಗೆ ಚೆನ್ನಾಗಿ ಗೊತ್ತಿತ್ತು. ಹಾಗಾಗಿ ರಥವನ್ನು ನೇರವಾಗಿ ಆತನ ಪಿತಾಮಹ ಭೀಷ್ಮ, ಗುರು ದ್ರೋಣಾಚಾರ್ಯರ ರಥದ ಮುಂದೆ ತಂದಿರಿಸುತ್ತಾನೆ. ತನ್ನ ಗುರು-ಹಿರಿಯರನ್ನು ಕಂಡಾಕ್ಷಣವೇ ಅರ್ಜುನನ ದೇಹ, ಮನಸ್ಸು, ಹೃದಯ ಕುಸಿದು ಬೀಳತೊಡಗುತ್ತದೆ. ಆತನಲ್ಲಿ ವಿಷಾದಯೋಗ ಮೂಡುತ್ತದೆ! ಆಧ್ಯಾತ್ಮಿಕ ವಿಚಾರಧಾರೆಯನ್ನು ಸ್ವೀಕರಿಸುವುದಕ್ಕೆ ಆತನು ಮನಸ್ಸು ಪಕ್ವವಾಗುತ್ತದೆ. ದೇವನೊಬ್ಬನೇ ಸೂತ್ರಧಾರಿ, ನಾನು ಕೇವಲ ಪಾತ್ರಧಾರಿ ಎಂಬ ಅರಿವಿನಲ್ಲಿ ಆತ್ಮಾವಲೋಕನ ಸಾಧ್ಯವಾಗುತ್ತದೆ.