ಆಧುನಿಕ ನಾಗರಿಕ ಬದುಕಿನ ಮುಖ್ಯ ಲಕ್ಷಣಗಳಲ್ಲಿ ಪೈಪೋಟಿ ಎನ್ನುವುದೊಂದು ಅನಿವಾರ್ಯ ಪೀಡೆ. ಅದನ್ನು ಎದುರಿಸದೆ ನಿರ್ವಾಹವಿಲ್ಲದ ಸ್ಥಿತಿ ನಮ್ಮದು. ಈ ಪೈಪೋಟಿಯ ಪರಿಣಾಮವಾಗಿ ಸದಾ ಯಶಸ್ಸಿನ ಬೆನ್ನು ಹತ್ತಿರುವ ನಮಗೆ ಅಹಂಕಾರವೇ ಅತಿ ದೊಡ್ಡ ಶತ್ರುವಾಗಿ ಕಾಡುವುದು ಸಹಜ. ಆದರೆ ಆ ಅಹಂಕಾರವನ್ನು ನಾವು ನಮ್ಮ ಶತ್ರುವೆಂದು ಪರಿಗಣಿಸುವುದೇ ಇಲ್ಲ. ಅದು ಸದಾ ನಮ್ಮ ಮಿತ್ರನಂತೆ, ಹಿತೈಷಿಯಂತೆ, ನಮ್ಮ ನೆರಳಿನ ಹಾಗೆ ನಮ್ಮ ಜತೆಗೆಯೇ ಇರುವುದು. ಅಹಂಕಾರದ ಫಲವಾಗಿ ನಾವು ಬದುಕಿನ ವಾಸ್ತವತೆಯನ್ನು ಅರಿಯಕಾರೆವು. ಸ್ವಲ್ಪವೇ ಸ್ವಲ್ಪ ಸಂಪತ್ತು, ಅಧಿಕಾರ, ಅಂತಸ್ತು, ಕೀರ್ತಿ ದೊರೆತರೂ ಅದುವೇ ಬಹಳ ದೊಡ್ಡ ಸಾಧನೆ ಎಂದು ಭಾವಿಸಿ ಅಹಂಕಾರದಿಂದ ಬೀಗುತ್ತೇವೆ. ಆ ಯಶಸ್ಸು ಸಂಪೂರ್ಣವಾಗಿ ‘ನನ್ನ ಶಕ್ತಿ, ಸಾಮಥ್ರ್ಯ, ಬುದ್ಧಿ ಕೌಶಲದಿಂದ ಪ್ರಾಪ್ತವಾಯಿತು’ ಎಂಬ ಭ್ರಮೆಯಲ್ಲಿ ಮುಳುಗುತ್ತೇವೆ! ಸತ್ಯವನ್ನು ಅಸತ್ಯವೆಂದೂ ಅಸತ್ಯವನ್ನು ಸತ್ಯವೆಂದೂ ಭಾವಿಸುವುದೇ ಭ್ರಮೆ. ಇಲ್ಲಿ ಅಹಂಕಾರದ ಭಾವವು ಸತ್ಯವನ್ನು ಸಂಪೂರ್ಣವಾಗಿ ಮರೆಮಾಚುವುದರಿಂದ ‘ನಾನೇ ಕರ್ತೃ’ವೆಂಬ ಅಹಂಕಾರವನ್ನು ಅದು ನಮ್ಮಲ್ಲಿ ಮೂಡಿಸುತ್ತದೆ. ಕರ್ಮಫಲವನ್ನು ತೀವ್ರವಾಗಿ ಅಪೇಕ್ಷಿಸುವ ಸ್ವಾರ್ಥಭಾವನೆಯನ್ನೂ ಅದು ಬೆಳೆಸುತ್ತದೆ. ಗೀತೆಯಲ್ಲಿ ಶ್ರೀಕೃಷ್ಣ ಹೇಳುತ್ತಾನೆ; ಕರ್ಮಗಳ ಫಲದಲ್ಲಿ ನನಗೆ ಇಚ್ಛೆ ಇಲ್ಲ. ಆದುದರಿಂದಲೇ ನನ್ನನ್ನು ಕರ್ಮಗಳು ಅಂಟಿಕೊಳ್ಳುವುದಿಲ್ಲ. ಈ ರೀತಿಯಲ್ಲಿ ನನ್ನನ್ನು ಯಾರು ಯಥಾರ್ಥವಾಗಿ ತಿಳಿದುಕೊಳ್ಳುತ್ತಾರೋ ಅವರು ಕೂಡ ಕರ್ಮಗಳಿಂದ ಬಂಧಿಸಲ್ಪಡುವುದಿಲ್ಲ. ‘ನಾನೇ ಕರ್ತೃ’ವೆಂಬ ಅಹಂಕಾರ ಕೂಡ ಅವರಲ್ಲಿ ಮೂಡಲು ಅವಕಾಶ ಉಂಟಾಗುವುದಿಲ್ಲ. ಕರ್ಮಬಂಧನದಿಂದ ವಿಮುಕ್ತರಾಗುವುದರಲ್ಲೇ ದೇವರ ಸಾಕ್ಷಾತ್ಕಾರದ ಸಿದ್ಧಿ ಇದೆ ಎಂಬ ರಹಸ್ಯ ಶ್ರೀ ಕೃಷ್ಣನ ಮಾತುಗಳಲ್ಲಿದೆ.