ಮನಸ್ಸಿನ ಆನಂದದಲ್ಲೇ ದೇವರನ್ನು ಕಾಣಲು ಸಾಧ್ಯ. ಮನಸ್ಸಿನ ಆನಂದವನ್ನು ಪಡೆಯಲು ನಮ್ಮನ್ನು ನಾವು ಮೊದಲು ತಿಳಿದುಕೊಳ್ಳುವುದು ಅಗತ್ಯ. ನಮ್ಮನ್ನು ನಾವು ತಿಳಿದುಕೊಳ್ಳುವುದೆಂದರೆ ನಮ್ಮ ಗುಣದೋಷಗಳನ್ನು ಅರಿಯುವುದೆಂದೇ ಅರ್ಥ. ಸಾಮಾನ್ಯವಾಗಿ ನಾವು ಗುಣಗಳನ್ನು ಸಾವಿರ ಪಟ್ಟು ಹಿಗ್ಗಿಸಿ ನಮ್ಮನ್ನು ಈ ಪ್ರಪಂಚದ ಸರ್ವಶ್ರೇಷ್ಠ ವ್ಯಕ್ತಿ ಎಂದು ಭ್ರಮಿಸುವ ಸ್ವಭಾವವನ್ನು ಹೊಂದಿದ್ದೇವೆ. ಹಾಗಾಗಿಯೇ ನಮಗೆ ನಮ್ಮ ದೋಷಗಳು ಸಾಸಿವೆಕಾಳಿನ ಗಾತ್ರದಲ್ಲಿಯೂ ಕಾಣಿಸುವುದಿಲ್ಲ. ಅನ್ಯರಲ್ಲಿ ನಾವು ಕಾಣುವ ಲೋಪದೋಷಗಳು ನಮಗೆ ನಮ್ಮಲ್ಲಿ ಕಾಣಸಿಗುವುದಲಿಲ್ಲ.ಯಾರು ಎಲ್ಲದರ ಜ್ಞಾನವನ್ನು ಪಡೆದು ತನ್ನನ್ನು ಮಾತ್ರ ತಿಳಿದಿಲ್ಲವೋ ಅವರು ಎಲ್ಲದರ ಜ್ಞಾನವನ್ನು ಕಳೆದುಕೊಳ್ಳುತ್ತಾರೆ.’ ಎಂದರೆ ನಮ್ಮನ್ನು ನಾವು ಅರಿಯದೆ ಹೋದರೆ ಬೇರೆ ಯಾವ ಜ್ಞಾನವೂ ನಮಗೆ ನಿಷ್ಪ್ರಯೋಜಕವೆಂಬುದು ಈ ಮಾತಿನ ತಾತ್ಪರ್ಯ. ಒಮ್ಮೆ ಅಮೆರಿಕದ ಕೆಲ ಬುದ್ಧಿಜೀವಿಗಳು ಜಪಾನ್‍ಗೆ ಪ್ರವಾಸ ಹೋದಾಗ ಅಲ್ಲಿನ ಅನೇಕ ಬೌದ್ಧವಿಹಾರಗಳಿಗೆ ಭೇಟಿಕೊಟ್ಟರು. ಹಾಗೆಯೇ ಅಲ್ಲಿ ಒಬ್ಬ ಝೇನ್ ಗುರುವನ್ನೂ ಭೇಟಿಯಾದರು. ಅತ್ಯಂತ ಸರಳ ಜೀವನ ಕ್ರಮದೊಂದಿಗೆ ಬದುಕಿನ ಸೂಕ್ಷ್ಮಗಳನ್ನು ಅಭ್ಯಸಿಸುವ ಮೂಲಕ ಆತ್ಮಾನಂದವನ್ನು ಪಡೆಯುವ ಝೇನ್ ತತ್ತ್ವದ ಮಹತ್ವವನ್ನು ತಿಳಿದುಕೊಳ್ಳಲು ಆ ಅಮೇರಿಕನ್ ಪ್ರವಾಸಿಗಳಿಗೆ ಸಾಧ್ಯವಾಗದೆ ದೇವರು ಆ ಝೇನ್ ಗುರುಗಳಲ್ಲಿ ಕೊಂಚ ವ್ಯಂಗ್ಯದಿಂದ ಹೇಳಿದರಂತೆ: ‘ನಿಮ್ಮ ಧರ್ಮ ಏನು ಹೇಳುತ್ತೆ ಅಂತ ನಮಗೆ ಇನ್ನೂ ಅರ್ಥವಾಗಿಲ್ಲ.’ ಅದಕ್ಕೆ ಆ ಗುರುಗಳು ದೊಡ್ಡದಾಗಿ ನಕ್ಕು, ‘ಅಯ್ಯೋ, ನಮ್ಮ ಧರ್ಮ ಏನನ್ನೂ ಹೇಳುವುದಿಲ್ಲ. ಚೆನ್ನಾಗಿ ಹೊಟ್ಟೆ ತುಂಬ ನಕ್ಕು, ನರ್ತಿಸಿ. ಆನಂದದಿಂದ ಬದುಕಿ. ನೀವು ಖಂಡಿತ ದೇವರನ್ನು ತಲುಪುತ್ತೀರಿ’ ಎಂದರಂತೆ.