ಸದಭಿಮಾನದ ಗೂಡಾಗಬೇಕಾದ ನಾವು ದುರಭಿಮಾನದ ಗೂಡಾಗಿರಲು ಕಾರಣವೇನು? ‘ನಾನೆಂದರೆ ದೇಹ’ ಎಂದು ನಾವು ತಿಳಿದಿರುವುದೇ ಇದಕ್ಕೆ ಮುಖ್ಯ ಕಾರಣ. ಈ ಭವತಿಕ ದೇಹವೇ ನಮ್ಮ ಅಸ್ತಿತ್ವವನ್ನು ವ್ಯಕ್ತಪಡಿಸುವ ಮಾಧ್ಯಮ. ಆಧ್ಯಾತ್ಮಿಕ ದೃಷ್ಟಿಯಿಂದ ‘ನಾನೆಂದರೆ ದೇಹವಲ್ಲ, ಆತ್ಮ’ ಎನ್ನುವುದು ಮುಖ್ಯ. ಪಂಚೇಂದ್ರಿಯಗಳನ್ನು ಒಳಗೊಂಡ ದೇಹವು ಪ್ರಕೃತಿಯ ಸಮಸ್ತ ಚಟುವಟಿಕೆಗಳಿಗೆ ಸ್ಪಂದಿಸಿ ಸುಖ-ದುಃಖಗಳ ಅನುಭವವನ್ನು ಪಡೆಯುವುದರಿಂದ ಅದು ನಿರಂತರವಾಗಿ ಬಾಹ್ಯ ಶಕ್ತಿಯ ಪ್ರಭಾವಕ್ಕೆ, ಪ್ರಲೋಭನೆಗೆ ಗುರಿಯಾಗಿರುವುದು ಸಹಜ. ನಮ್ಮ ದೇಹವು ನಮ್ಮ ಮನಸ್ಸು, ಬುದ್ಧಿ ಹಾಗೂ ಆತ್ಮನ ಇಷ್ಟದಂತೆ, ಆದೇಶದಂತೆ ಕಾಯಚರಿಸುವ ಅತ್ಯಂತ ದಕ್ಷ ಹಾಗೂ ಪರಿಣಾಮಕಾರಿ ಸಾಧನ. ಬದುಕಿನ ಸಮಸ್ತ ಕಾರ್ಯಚಟುವಟಿಕೆಗಳನ್ನು, ಸಿದ್ಧಿ-ಸಾಧನೆಗಳನ್ನು ಯಶಸ್ವಿಯಾಗಿ ನೆರವೇರಿಸುವ ಅಪೂರ್ವ ಉಪಕರಣ. ಇಷ್ಟು ಪ್ರಯೋಜನಕಾರಿಯೂ ಉಪಯಕಾರಿಯೂ ಆಗಿರುವ ನಮ್ಮೀ ದೇಹವನ್ನು ನಾವು ಕಾಣುವ, ಬಳಸುವ, ನಿರ್ವಹಿಸುವ ರೀತಿ ಮಾತ್ರ ವಿಭಿನ್ನವೂ ವಿಚಿತ್ರವೂ ಆದದ್ದು. ಬದುಕಿನ ಉದ್ದಕ್ಕೂ ‘ನಾನೇ ದೇಹ’ ಎಂಬ ಭ್ರಮೆಯಲ್ಲಿ ಬದುಕುವ ನಾವು ದೇಹವನ್ನು ಸೌಂದರ್ಯ, ದುರಭಿಮಾನ, ಅಹಂಕಾರ, ತತ್ಸಾರ, ಅಸೂಯೆಯೇ ಮೊದಲಾದ ದೃಷ್ಟಿಯಿಂದ ನೋಡುವ ಮೂಲಕ ದೇಹವೆಂಬ ಉಪಕರಣದ ಮಹತ್ತರ ಉದ್ದೇಶಗಳನ್ನು ಮರೆಯುತ್ತೇವೆ. ಹಾಗೆಯೇ ಪಂಚಭೂತಗಳಿಂದ ಆಗಿರುವ ನಮ್ಮೀ ದೇಹವು ಮತ್ತೇ ಪಂಚಭೂತಗಳನ್ನು ಸೇರುವುದರಿಂದ ಅದು ನಶ್ವರ ಎನ್ನುವ ಸತ್ಯವನ್ನು ಕೂಡ ಮರೆಯುತ್ತೇವೆ. ಆದುದರಿಂದಲೇ ಅದು ನಮ್ಮಲ್ಲಿ ಹುಟ್ಟಿಸುವ ಮಮಕಾರ, ಅಸೂಯೆ, ದುರಭಿಮಾನಿಗಳಿಗೆ ನಾವು ಬಲಿಯಾಗುತ್ತೇವೆ.