Home » ದೇಹದ ಸದ್ಬಳಕೆ
 

ದೇಹದ ಸದ್ಬಳಕೆ

by Kundapur Xpress
Spread the love

ನಮ್ಮ ದೇಹವು ಸಮಯದ ವಿರುದ್ಧ ಹೋರಾಡುವ ಒಂದು ಯಂತ್ರ. ನಿರಂತರ ಚಾಲನೆಯಲ್ಲಿ ಇರಬೇಕಾಗಿರುವ ಆ ಯಂತ್ರವು ತನ್ನೀ ಕಾಯಕದಿಂದಾಗಿ ಆಗೀಗ ತೊಂದರೆಗಳಿಗೆ ಸಿಲುಕಿಕೊಳ್ಳುತ್ತಲೇ ಇರುತ್ತದೆ. ಅಂತೆಯೇ ದುರಸ್ತಿಗೆ ಒಳಪಡುತ್ತಲೇ ಇರುತ್ತದೆ. ಹಾಗೆಂದು ಅದರ ಆಯುಷ್ಯವನ್ನು ನಾವು ಹಿಗ್ಗಿಸಲಾರೆವು. ಅದು ನಮ್ಮ ಕೈಮೀರಿದ ವಿಷಯ. ಆದರೆ ಅದನ್ನು ಸುಸ್ಥಿತಿಯಲ್ಲಿರಿಸಿಕೊಂಡು ಅದರಿಂದ ಗರಿಷ್ಠ ಪ್ರಯೋಜನವನ್ನು ನಮಗೂ ಇತರರಿಗೂ ದೊರಕಿಸಬಲ್ಲೆವು. ಆದರೆ ಹಾಗೆ ಮಾಡಬೇಕಾದರೆ ಉದ್ದೇಶಗಳು ಪವಿತ್ರವಾಗಿರಬೇಕಾಗುತ್ತದೆ. ದ್ವೇಷ, ಅಸೂಯೆ, ಅಹಂಕಾರದಿಂದ ದುರುದ್ದೇಶಗಳಿಗೆ ದೇಹವನ್ನು ಬಳಸಿದ್ದೇ ಆದಲ್ಲಿ ಅದರ ಶಕ್ತಿಯ ದುರ್ವಿನಿಯೋಗವಾಗುವುದು. ಅಂತೆಯೇ ಆಯುಷ್ಯವೂ ಬೇಗನೆ ಕ್ಷೀಣಿಸುವುದು. ಆದುದರಿಂದ ಸತ್ಕಾರ್ಯಗಳಿಗೆ, ಸದುದ್ದೇಶಗಳ ಮಹತ್ಕಾರ್ಯಕ್ಕೆ, ಪರೋಪಕಾರಾರ್ಥವಾಗಿ ದೇಹಶಕ್ತಿಯ ವಿನಿಯೋಗವಾಗುವುದೇ ಮುಖ್ಯ. ದೇವರ ಅಪೇಕ್ಷೆಯೂ ಇದೇ ಆಗಿದೆ. ಈ ಸೂಕ್ಷ್ಮವನ್ನು ತಿಳಿಯದೆ ಅವಿವೇಕಿಯಾದ ಮನುಷ್ಯನು ಪರಪೀಡನೆಯ ದುಷ್ಕ್ರತ್ಯಗಳಿಗೆ ಅಮೂಲ್ಯವಾದ ದೇಹಶಕ್ತಿಯನ್ನು ಬಳಸುತ್ತಾನೆ. ಶ್ರೇಷ್ಠವಾಗಿರುವ ಮನುಷ್ಯ ಜನ್ಮವನು ವ್ಯರ್ಥಗೊಳಿಸುತ್ತಾನೆ. ಆದುದರಿಂದಲೇ ಬದುಕಿನ ಪ್ರತಿಯೊಂದು ನಿಮಿಷ, ಗಂಟೆ, ದಿನ, ವರ್ಷಗಳು ಅತ್ಯಂತ ಅಮೂಲ್ಯ. ಕಳೆದು ಹೋದ ಹೊತ್ತು, ಜಾರಿ ಹೋದ ಸಮಯ ಮತ್ತೆ ಸಿಗದು. ಪವಿತ್ರ ಗಂಗೆಯ ನೀರು ಸಮುದ್ರವನ್ನು ಸೇರಿದಾಕ್ಷಣವೇ ಮತ್ತೆ ನಾವು ಅಲ್ಲಿ ಗಂಗೆಯ ನೀರನ್ನು ಪಡೆಯಲಾರೆವು. ಹಾಗೆಯೇ ನಮ್ಮೀ ದೇಹ! ಪಂಚಭೂತಗಳಿಂದ ಉಂಟಾದ ಈ ದೇಹವು ತಿರುಗಿ ಪಂಚಭೂತಗಳನ್ನು ಸೇರಿದ ಬಳಿಕ ಅದು ಮತ್ತೆ ಕಾಣಸಿಗುವುದುಂಟೆ?

 

Related Articles

error: Content is protected !!