ಸ್ವಾಮಿ ವಿವೇಕಾನಂದರು ಒಂದೆಡೆ ಹೇಳುತ್ತಾರೆ: ‘ಭಗವಂತ ಮತ್ತು ನಿಮ್ಮಲ್ಲಿರುವ ಪ್ರೇಮ ಇವುಗಳ ಮಧ್ಯದಲ್ಲಿ ಬೇರೇನೂ ಇಲ್ಲದಿರಲಿ. ಅವನನ್ನು ಪ್ರೀತಿಸುವುದನ್ನು ಬಿಟ್ಟರೆ ಅಲ್ಲಿ ಇನ್ನೇನೂ ಬರದಿರಲಿ.’ ಭಗವಂತನ ಆರಾಧನೆಯಲ್ಲಿ ನಾವು ಈ ಮಾತನ್ನು ನೆನಪಿನಲ್ಲಿಡುವುದು ತುಂಬಾ ಮುಖ್ಯ. ಎಷ್ಟೋ ವೇಳೆ ನಾವು ದೇವರನ್ನು ಆರಾಧಿಸುವಾಗ, ಭಜಿಸುವಾಗ ನಮ್ಮಲ್ಲಿ ಹಲವಾರು ಬೇಡಿಕೆಗಳ ಪಟ್ಟಿಯೇ ಇರುತ್ತದೆ. ಆಯುರಾರೋಗ್ಯ, ಸಂಪದಭಿವೃದ್ದಿಯಿಂದ ತೊಡಗಿ ಹೆಂಡತಿ, ಮಕ್ಕಳು, ಬಂಧು-ಬಳಗ, ಹಿತೈಷಿಗಳು, ಮಿತ್ರರೇ ಮೊದಲಾದ ಆಪ್ತ ಜನರ ಸುಖ-ಸಂತೋಷಕ್ಕೆ ಸಂಬಂಧಿಸಿದ ಬೇಡಿಕೆಗಳು ಹನುಮಂತನ ಬಾಲದಷ್ಟು ದೊಡ್ಡದಿರುತ್ತದೆ. ಒಂದೊಂದು ಬಗೆಯ ಬೇಡಿಕೆಯನ್ನು ಪೂರೈಸಿಕೊಳ್ಳಲು ಒಂದೊಂದು ಬಗೆಯ ದೇವ-ದೇವತೆಯರನ್ನು ಆರಾಧಿಸುವುದು ನಮ್ಮ ರೂಢಿ. ನಮ್ಮ ಪಾಲಿಗೆ ಹೇಗೂ ಮೂವತ್ತಮೂರು ಕೋಟಿ ದೇವ-ದೇವತೆಯರು ಇರುವುದರಿಂದ ನಮ್ಮ ಪ್ರತಿಯೊಂದು ಆಸೆ-ಆಕಾಂಕ್ಷೆಗಳನ್ನು ಈಡೇರಿಸಿಕೊಳ್ಳಲು ನಾವು ವಿಧವಿಧದ ದೇವ-ದೇವತೆಯರನ್ನು ಆರಾಧಿಸುತ್ತೇವೆ. ‘ದೇವರೊಬ್ಬನೇ, ನಾಮ ಹಲವು’ ಎಂಬ ಸತ್ಯದ ಅರಿವಿದ್ದರೂ ನಾವೇಕೆ ಹೀಗೆ ಮಾಡುತ್ತೇವೆ? ಇದು ನಿಜಕ್ಕೂ ವಿಚಾರ ಮಾಡಬೇಕಾದ ವಿಷಯ. ಶ್ರೀಮನ್ನಾರಾಯಣನೊಬ್ಬನೇ ದೇವನಾದರೂ ವಿಧ ವಿಧದ ಉದ್ದೇಶಗಳಿಗೆ ವಿಧವಿಧದ ದೇವ-ದೇವತೆಯರನ್ನು ನಾವು ಭಜಿಸಲು ಕಾರಣ ಆ ದೇವ-ದೇವತೆಯರು ಶ್ರೀಮನ್ನಾರಾಯಣನ ಅಂಶವೇ ಆಗಿರುವುದು. ಯಾಗ-ಯಜ್ಞ, ಹೋಮ-ಹವನದ ಮೂಲಕ ಆ ದೇವತೆಯರನ್ನು ಒಲಿಸಿಕೊಳ್ಳುವುದು ಕಷ್ಟವೇನಲ್ಲ. ಆದುದರಿಂದಲೆ ಅವರಿಂದ ಐಹಿಕ ಸುಖದ ಅನುಗ್ರಹ, ಆಯುರಾರೋಗ್ಯ, ಸಂಪದಭಿವೃದ್ದೀಯ ಅನುಗ್ರಹವನ್ನು ಪಡೆಯುವುದು ಸುಲಭ. ಕಲಿಯುಗದಲ್ಲಂತೂ ಭಕ್ತರ ಆಸೆ-ಆಕಾಂಕ್ಷೆಗಳು ಈ ದೇವ-ದೇವತೆಯರ ಮೂಲಕ ಅತ್ಯಂತ ಕ್ಷಿಪ್ರವಾಗಿ ಈಡೇರುತ್ತದೆ ಎಂಬುದು ಇನ್ನೂ ಮುಖ್ಯವಾದ ವಿಷಯ!