ನಮ್ಮ ಹೃದಯದೇಗುಲದಲ್ಲಿ ಜೀವಾತ್ಮನಾಗಿ ನೆಲೆನಿಂತಿರುವ ಪರಮಾತ್ಮನನ್ನು ಕಾಣಲು ಮೂಲಭೂತವಾಗಿ ನಮ್ಮ ದೇಹದ ಆರೋಗ್ಯ ಎಷ್ಟು ಮುಖ್ಯ ಎಂಬುದನ್ನು ನಾವು ಅರಿತಿರಬೇಕು. ದೇಹವು ಕೊನೆಗೂ ಒಂದು ಉಪಕರಣವೇ ವಿನಾ ನಾವೇ ದೇಹವಲ್ಲ ಎಂಬ ಸತ್ಯದ ಅರಿವು ಅತೀ ಅಗತ್ಯ. ಇಲ್ಲದಿದ್ದರೆ ನಾವು ಆರಂಭದ ಹಂತದಲ್ಲೇ ದಾರಿ ತಪ್ಪುವೆವು. ಯೌವನದ ಬಿಸಿರಕ್ತದ ಭರದಲ್ಲಿ ನಾವೆಂದರೆ ನಮ್ಮ ದೇಹವೇ ಎಂಬಷ್ಟು ಭ್ರಮೆ ನಮ್ಮಲ್ಲಿ ತುಂಬಿಕೊಂಡಿರಲು, ದೇಹದ ಕುರಿತಾಗಿ ನಾವು ಹೊಂದಿರುವ ಅತಿಯಾದ ಅಹಂಕಾರವೇ ಕಾರಣ. ತಾರುಣ್ಯದಲ್ಲಿ ದೇಹವು ಹೊಂದಿ ರುವ ಶಕ್ತಿ, ಸೌಂದರ್ಯ ನಮ್ಮಲ್ಲಿ ಈ ಭ್ರಮೆಯನ್ನು ಉಂಟುಮಾಡುವ ಮೂಲಕ ನಾವು ‘ಸರ್ವಶಕ್ತರು‘ ಎಂಬ ಭಾವನೆಯನ್ನು ಅದು ಗಟ್ಟಿಮಾಡುತ್ತದೆ. ದೇಹದ ಶಕ್ತಿ ಮತ್ತು ಸೌಂದರ್ಯವೇ ನಮ್ಮಲ್ಲಿ ತಾರುಣ್ಯದ ಮದವನ್ನು ದಿನದಿನೇ ಹೆಚ್ಚಿಸುತ್ತನಮ್ಮಲ್ಲಿ ಅದು ನಾಸ್ತಿಕ ಮನೋಭಾವವನ್ನು ತೀವ್ರಗೊಳಿಸುತ್ತದೆ. ‘ದೇವರೇ ಇಲ್ಲ ಇರುವುದು ನಾವು ಮಾತ್ರ; ಪಾಪ-ಪುಣ್ಯ, ಸ್ವರ್ಗ – ನರಕ ಎಲ್ಲವೂ ಸುಳ್ಳು‘ ಎಂಬ ಧಾಷ್ಟ್ರ್ಯವನ್ನೂಹುಟ್ಟಿಸುತ್ತದೆ.ಇದೆಲ್ಲ ಏಕೆ ಹೀಗಾಗುತ್ತದೆ ಎಂದರೆ ದೇಹದ ಕುರಿತಾಗಿ ನಾವು ಅಹಂಕಾರ ಹೊಂದಿರುವುದರಿಂದ. ಆದರೆ ನಮ್ಮೊಳಗಿನ ಅಹಮಿಕೆಯನ್ನು ಮುರಿಯುವುದೇ ದೇವರಿಗೆ ಅತ್ಯಂತ ಪ್ರಿಯವಾದ ಬಿಡುವಿನ ಹವ್ಯಾಸ ! ‘ತೇನ ವಿನಾ ತೃಣಮಪಿ ನ ಚಲತಿ‘ ಎಂಬ ಸತ್ಯವನ್ನು ನಮಗೆ ತಿಳಿಸಿ ಕೊಡುವುದರಲ್ಲೇ ಆತನಿಗೆ ಖುಶಿ. ನಮ್ಮ ದೇಹಕ್ಕೆ ಒಂದು ಸಣ್ಣ ಆಘಾತ ಉಂಟಾಗುವ ಮೂಲಕವೇ ಈ ಸತ್ಯ ಥಟ್ಟನೆ ನಮ್ಮ ಅರಿವಿಗೆ ಬರುವುದು. ಕೂಡಲೇ ದೇವರ ನೆನಪು ನಮಗಾಗುವುದು. ನಮ್ಮೆಲ್ಲ ಅಹಂಕಾರವನ್ನು ಬದಿಗೊತ್ತಿನಮ್ಮ ದೇಹಕ್ಕೆ ಅಡರಿದ ವ್ಯಾಧಿಯನ್ನು ಬೇಗನೆ ಗುಣಪಡಿಸಬೇಕೆಂದು ಆತನಲ್ಲಿ ಮೊರೆ ಇಡುವೆವು. ಆ ಮೂಲಕ ಆತನ ಅಸ್ತಿತ್ವವನ್ನು ಒಪ್ಪಿಕೊಳ್ಳುವೆವು !