- ನಮ್ಮನ್ನೇ ಅರಿಯದ ನಾವು
ಮನಸ್ಸಿನ ಶಕ್ತಿಯ ಸಾಧ್ಯತೆಗಳು ಅಪಾರ. ಅದನ್ನು ನಿಖರವಾಗಿ ಅಳೆಯಲು ಇನ್ನೂ ಯಾರಿಗೂ ಸಾಧ್ಯವಾಗಿಲ್ಲ. ಎಲ್ಲಕ್ಕಿಂತ ದೊಡ್ಡ ದುರಂತವೆಂದರೆ ನಮ್ಮ ಮನಸ್ಸಿನೊಳಗೆ ಹುದುಗಿರುವ ಶಕ್ತಿಯ ಶೇ. 0.01ರಷ್ಟು ಪ್ರಮಾಣದ ಅರಿವು ಕೂಡ ನಮಗಿಲ್ಲ ಎನ್ನುತ್ತಾರೆ ಮನೋಜ್ಞಾನಿಗಳು. ನಾವು ನಮ್ಮ ಬದುಕಿನ ಯಾವತ್ತೂ ವ್ಯವಹಾರದಲ್ಲಿ, ಚಾಕಚಕ್ಯತೆಯಲ್ಲಿ, ಸೃಷ್ಟಿಶೀಲ ಕ್ರಿಯೆಗಳಲ್ಲಿ ಅಥವಾ ವೈಜ್ಞಾನಿಕ ಸಂಶೋಧನೆಗಳಲ್ಲೇ ಆಗಲಿ, ಬಳಸುವ ಮನಸ್ಸಿನ ಶಕ್ತಿ ಅತ್ಯಲ್ಪ ಪ್ರಮಾಣದ್ದಾಗಿದೆ ಎಂಬ ಸತ್ಯವನ್ನೂ ಮನೋಜ್ಞಾನಿಗಳು ಹೊರಗೆಡಹಿದ್ದಾರೆ. ಬದುಕಿನ ಉದ್ದಕ್ಕೂ ನಾವು ಗೌರವಾದರಗಳಿಂದ ಮೆರೆದಾಡುತ್ತೇವೆ. ಅಹಂಕಾರ, ಮಮಕಾರಗಳಿಂದ ಹಾರಾಡುತ್ತೇವೆ. ಖ್ಯಾತಿ, ಜನಪ್ರಿಯತೆಯ ಬೆನ್ನುಹತ್ತಿ ಮಾಡಬಾರದ್ದನ್ನೆಲ್ಲ ಮಾಡುತ್ತೇವೆ. ಜಗತ್ತನ್ನೇ ಅರಿತೆವೆಂದು ಬೀಗುತ್ತೇವೆ. ಆದರೆ ಸ್ವತಃ ನಮ್ಮನ್ನು ನಾವು ಒಂದಿನಿತೂ ಅರಿಯದೆಯೇ ಸಾವನಪ್ಪುತ್ತೇವೆ. ಹಾಗೆ ತನ್ನ ಶಕ್ತಿ ಸಾಮಥ್ರ್ಯ, ಸಾಧ್ಯತೆಗಳ ಕುರಿತು ಒಂದಿಷ್ಟೂ ಅರಿಯದೆ ಒಂದು ದಿನ ಈ ಲೋಕವನ್ನೇ ತ್ಯಜಿಸುವ ಮನುಷ್ಯನ ಸ್ಥಿತಿ ಅದೆಷ್ಟು ಶೋಚನೀಯ ಎಂದು ಉದ್ಗರಿಸುವ ಚಿಂತಕ ಎನನ್ ಅವರ ಮಾತುಗಳು ನಿಜಕ್ಕೂ ನಮ್ಮ ಕಣ್ಣು ತೆರೆಸುವಂತಿವೆ. ನಾವು ಬದುಕಿನುದ್ದಕ್ಕೂ ತಪ್ಪದೇ ಮಾಡುವ ಒಂದೇ ಒಂದು ಕೆಲಸವೆಂದರೆ ನಮ್ಮನ್ನು ನಾವು ಕೀಳಂದಾಜಿಸಿಕೊಳ್ಳುವುದು. ನಮ್ಮ ಶಕ್ತಿ–ಸಾಮಥ್ರ್ಯದ ಬಗ್ಗೆ ಅವಿಶ್ವಾಸವನ್ನು ಹೆಚ್ಚಿಸಿಕೊಳ್ಳುವುದು. ‘ನನ್ನಿಂದ ಇದು ಆಗುತ್ತೋ, ಇಲ್ಲವೋ’ ಎಂದು ಶಂಕಿಸುವುದು. ಕೆಲಸಕ್ಕೆ ತೊಡಗುವ ಮೊದಲೇ ‘ಇದು ನನ್ನಿಂದಾಗುವಂತಹದ್ದಲ್ಲ’ ಎಂದು ಶಂಕಿಸುವುದು. ಕೆಲಸಕ್ಕೆ ತೊಡಗುವ ಮೊದಲೇ ‘ಇದು ನನ್ನಿಂದಾಗುವಂತಹದ್ದಲ್ಲ’ ಎಂದು ತೀರ್ಮಾನಿಸುವುದು.