ಪಂಚೇಂದ್ರಿಯಗಳು ಸುಖವನ್ನು ಬಯಸುವುದು ಯಾಕಾಗಿ….? ಅವುಗಳು ಬಹಿರ್ಮುಖಿ ಗಳಾಗಿರುವುದರಿಂದ ಪ್ರಕೃತಿಯು ಒಡ್ಡುವ ನಿರಂತರ ಪ್ರಲೋಭನೆಗೆ ಗುರಿಯಾಗಿರುವುದರಿಂದ. ಹಾಗಾಗಿ ಕಣ್ಣುಗಳು ಸದಾ ದೃಶ್ಯಗಳನ್ನು ಕಾಣಲು ಬಯಸುತ್ತವೆ. ಕಿವಿಗಳು ಶಬ್ದಗಳನ್ನು ಆಲಿಸಲು ಬಯಸುತ್ತವೆ. ಚರ್ಮವು ಸ್ಪರ್ಶಸುಖವನ್ನು ಅನುಭವಿಸಲು ಹಾತೊರೆಯುತ್ತದೆ. ನಾಲಗೆಯು ರುಚಿಯನ್ನು ಸವಿಯಲು ಬಯಸಿದರೆ ಮೂಗು ವಾಸನೆಯನ್ನು ಆಘ್ರಾಣಿಸಲು ತವಕಿಸುತ್ತದೆ. – ಪ್ರಕೃತಿಯ ಅಧೀನವಾಗಿರುವ ಪಂಚೇಂದ್ರಿಯಗಳು ಸಹಜವಾಗಿಯೇ ಪ್ರಕೃತಿಯು ಒಡ್ಡುವ ಪ್ರಲೋಭನೆಗೆ ಗುರಿಯಾಗುತ್ತವೆ. ಹಾಗಾಗಿ ಮನಸ್ಸಿನಲ್ಲಿ ನಿರಂತರವಾಗಿ ಆಸೆಗಳು ಚಿಗುರುತ್ತಲೇ ಇರುತ್ತವೆ. ಪರಿಣಾಮವಾಗಿ ಕಾಮ, ಕ್ರೋಧಾದಿ ಷಡೈರಿಗಳು ನಮ್ಮೊಳಗೆ ಬಲಶಾಲಿಗಳಾಗುತ್ತವೆ. ಈ ಅರಿ ಷಡ್ವರ್ಗಗಳನ್ನು ನಿಯಂತ್ರಿಸದೆ ನಾವು ಬದುಕಿನ ಬಂಧನದಿಂದ ಬಿಡುಗಡೆಯನ್ನು ಹೊಂದಲಾರೆವು. ಈ ಷಡೈರಿಗಳೇ ಮನುಷ್ಯನನ್ನು ಪಾಪಕೂಪಕ್ಕೆ ತಳ್ಳುವುದು. ಹುಟ್ಟು-ಸಾವುಗಳ ಚಕ್ರಕ್ಕೆ ಸಿಲುಕಿಸುವುದು. ಪಂಚತಂತ್ರ ಹೇಳುತ್ತದೆ: ಪಾಪಗಳಿಗೆಲ್ಲ ಲೋಭವೇ ಮೂಲ ವ್ಯಾಧಿಗಳಿಗೆಲ್ಲ ರಸಗಳೇ ಮೂಲ. ದುಃಖಗಳಿಗೆಲ್ಲ ಸ್ನೇಹ ಸಂಬಂಧವೇ ಮೂಲ, ಲೋಭವು ಮನುಷ್ಯನ ಪ್ರಬಲ ವೈರಿ, ಲೋಭ ದಿಂದಾಗಿ ಮನುಷ್ಯ ಸ್ವಾರ್ಥಿಯಾಗುವನು. ತಾನು ತನ್ನದೆಂಬುದರ ನಡುವೆ ಆತನಿಗೆ ದೇವರೇಕೆ, ಸುತ್ತಮುತ್ತಲಿನ ಯಾರೂ ಗೋಚರವಾಗುವುದಿಲ್ಲ. ವ್ಯಾಧಿಗಳಿಗೆಲ್ಲ ರಸಗಳೇ ಮೂಲವಾಗಿರುವಂತೆ ನಮ್ಮ ದುಃಖಗಳಿಗೆಲ್ಲ ಸ್ನೇಹ ಸಂಬಂಧಗಳೇ ಮೂಲ. ನಿನ್ನ ಗುಣ-ನಡತೆ-ವ್ಯಕ್ತಿತ್ವ ಹೇಗೆ ಎನ್ನುವುದನ್ನು ನಿನ್ನ ಸ್ನೇಹಿತರನ್ನು ಕಂಡೇ ಅಂದಾಜಿಸಬಹುದು’ ಎಂಬ ನಾಣ್ಣುಡಿ ಇದೆ. ಲೋಭ ಮೋಹ, ಮಮಕಾರದ ಪರದೆಗಳನ್ನು ಕಿತ್ತೊಗೆಯದೆ ನಮ್ಮೊಳಗಿನ ದೇವರನ್ನು ಕಾಣಲು ಸಾಧ್ಯವೇ?