‘ನನ್ನ ಭಕ್ತರು ನನ್ನನ್ನು ಪ್ರೀತಿಯಿಂದ ಒಂದೇ ಒಂದು ಸಲ ಕರೆದರೂ ಸಾಕು; ನಾನು ಒಡನೆಯೇ ಅವರ ಕರೆಗೆ ಓಗೊಡುವೆನು’ ಎಂದು ಶ್ರೀಕೃಷ್ಣ ಗೀತೆಯಲ್ಲಿ ತನ್ನ ಭಕ್ತರ ಮೇಲೆ ತನಗಿರುವ ಪ್ರೀತಿ ಎಷ್ಟು ಎಂಬುದನ್ನು ನಿಚ್ಚಳಗೊಳಿಸುತ್ತಾನೆ. ಬದುಕಿನಲ್ಲಿ ಕಷ್ಟಗಳು ಬಂದಾಗ ಅವುಗಳಿಂದ ಪಾರುಗೊಳಿಸುವಂತೆ ಆರ್ತನಾಗಿ ಬೇಡಿಕೊಳ್ಳುವ ಭಕ್ತರ ನೆರವಿಗೆ ದೇವರು ಒಂದಿನಿತೂ ವಿಳಂಬವಿಲ್ಲದೆ ಬರುವನೆಂಬ ಬಗ್ಗೆ ಸಂದೇಹವೇ ಬೇಡ. ಆದರೆ ಆ ಭಕ್ತನಿಗೆ ತನ್ನ ಕಷ್ಟಗಳು ಪರಿಹಾರವಾದ ಬಳಿಕ ದೇವರ ಸ್ಮರಣೆಯೇ ಮರೆತುಹೋದರೆ? ಹಾಗೆಯೇ ಜೀವನದಲ್ಲಿ ತನಗೆ ಸಂಪತ್ತು, ಐಶ್ವರ್ಯ, ಅಂತಸ್ತು, ಅಧಿಕಾರವನ್ನು ಕರುಣಿಸೆಂದು ಬೇಡುವ ಭಕ್ತನಿಗೆ ಆತನ ಕೋರಿಕೆಯಂತೆ ದೇವರು ಅವೆಲ್ಲವನ್ನೂ ಕರುಣಿಸುವನು. ಆದರೆ ತನ್ನ ಕೋರಿಕೆಗಳು ಈಡೇರಿದ ಬಳಿಕ ಆತನಿಗೆ ದೇವರ ಸ್ಮರಣೆ ಮರೆತುಹೋದರೆ ಅದು ಯಾರ ತಪ್ಪು? ಅಂತೆಯೇ ವೇದ, ಉಪನಿಷತ್ತುಗಳು, ಪುರಾಣಗಳ ಅಧ್ಯಯನದಿಂದ ತನ್ನನ್ನು ಜ್ಞಾನಿಯಾಗಿ ಮಾಡೆಂದು ಬೇಡಿಕೊಳ್ಳುವ ಭಕ್ತನಿಗೆ ದೇವರ ಅನುಗ್ರಹವಾದ ಬಳಿಕ ಪಾಂಡಿತ್ಯವು ಪ್ರಾಪ್ತವಾಗಿ ಜ್ಞಾನದ ಅಹಂಕಾರವು ತಲೆಗೇರಿ ದೇವರೇ ಮರೆತು ಹೋದರೆ? ದೇವರು ಬೇಡಿದ್ದನ್ನೆಲ್ಲ ಕೊಡುವನು ನಿಜ, ಆದರೆ ಅದು ಭಕ್ತನ ನಿಜ ಗುಣವನ್ನು ಪರೀಕ್ಷಿಸಲು ಕೂಡ ಹೌದು | ದುಷ್ಟ ಮೊಸಳೆಯ ಬಾಯಿಗೆ ತನ್ನ ಕಾಲು ಸಿಲುಕಿ ಯಮಯಾತನೆಯನ್ನು ಅನುಭವಿಸುತ್ತಿದ್ದ ಗಜರಾಜನು ಆರ್ತನಾಗಿ ದೇವರಲ್ಲಿ ಮೊರೆಯಿಟ್ಟಾಗ ಆತನಿಗೆ ಮೋಕ್ಷವನ್ನು ಕರುಣಿಸಲು ಒಡನೆಯೇ ದೇವರು ಬರಲಿಲ್ಲವೆ? ತನ್ನ ಬಾಲ್ಯದ ಗೆಳೆಯನಾಗಿದ್ದು ದಟ್ಟದಾರಿದ್ರಕ್ಕೆ ಸಿಲುಕಿದ್ದ ಸುಧಾಮನಿಗೆ ಕೃಷ್ಣನು ಅಪಾರ ಐಶ್ವರ್ಯವನ್ನು ಕರುಣಿಸಲಿಲ್ಲವೆ? ಪ್ರಪಂಚದ ಸಕಲ ಚರಾಚರ ವಸ್ತುಗಳಲ್ಲಿ ವಿಷ್ಣುವನ್ನಲ್ಲದೆ ಬೇರೇನನ್ನೂ ಕಾಣದ ಭಕ್ತ ಪ್ರಹ್ಲಾದನಿಗೆ ಆತನ ಬಯಕೆಯಂತೆ ದೇವರೇ ಪ್ರತ್ಯಕ್ಷವಾಗಲಿಲ್ಲವೇ? ತಮ್ಮ ಬೇಡಿಕೆಗೆ ತಕ್ಕಂತೆ ಅನುಗ್ರಹಿಸುವ ದೇವರನ್ನು ಸದಾ ಸ್ಮರಿಸುವುದು ಭಕ್ತರ ಪರಮ ಕರ್ತವ್ಯವೇ ಆಗಿದೆ.