ದೇವರಲ್ಲಿ ಪ್ರಾರ್ಥನೆ ಸಲ್ಲಿಸುವುದೆಂದರೆ ಏನು? ಇದನ್ನು ಸರಿಯಾಗಿ ತಿಳಿದುಕೊಳ್ಳದಿದ್ದರೆ ಪ್ರಾರ್ಥನೆಯ ಮಹತ್ವವೇ ನಷ್ಟವಾದೀತು. ಪ್ರಾರ್ಥನೆ ಎಂದರೆ ನಿವೇದನೆ ಎಂದರ್ಥ. ದೇವರಲ್ಲಿ ನಾವು ನಿವೇದಿಸಿಕೊಳ್ಳುವುದು ಏನನ್ನು? ನಮ್ಮ ಕಷ್ಟಗಳನ್ನು, ಸಮಸ್ಯೆಗಳನ್ನು, ಬಾಳಿನಲ್ಲಿ ನಮಗೆ ಎದುರಾಗಿರುವ ಎಡರು ತೊಡರುಗಳನ್ನು ಪರಿಹರಿಸಿ ಸುಖ, ಸಂತೋಷ, ನೆಮ್ಮದಿ, ಐಶ್ವರ್ಯ, ಸಂಪತ್ತನ್ನು ಕರುಣಿಸು ಎಂಬ ನಿವೇದನೆಯೇ ಸಾಮಾನ್ಯವಾಗಿ ದೇವರಲ್ಲಿನ ನಮ್ಮ ಪ್ರಾರ್ಥನೆಯಾಗಿರುತ್ತದೆ. ಆದರೆ ಕಷ್ಟಗಳು, ತೊಂದರೆಗಳು, ದುಃಖಗಳು ಮನುಷ್ಯರಿಗಲ್ಲದೆ ಇನ್ಯಾರಿಗೆ ಬರುತ್ತವೆ? ಆದರೂ ನಾವು ದೇವರಲ್ಲಿ ಸಾಮಾನ್ಯವಾಗಿ ನಿವೇದಿಸುವುದು ನಮ್ಮ ದುಃಖ-ದುಮ್ಮಾನಗಳನ್ನು ಮಾತ್ರ. ನಿಜವಾದ ಅರ್ಥದಲ್ಲಿ ಅದನ್ನು ಪ್ರಾರ್ಥನೆ ಎನ್ನಲಾಗದು. ಕಷ್ಟಗಳನ್ನು ಪರಿಹರಿಸಬೇಕೆಂಬ ಕೋರಿಕೆಯನ್ನು ಮನ್ನಿಸಲು ಆ ದೇವರಿಗೆ ನಾವು ವಿನಿಮಯ ರೂಪದಲ್ಲಿ ಏನೇನನ್ನೆಲ್ಲ ಕೊಡುವೆವು! ಒಂದು ದೃಷ್ಟಿಯಲ್ಲಿ ಇದು ಕೊಟ್ಟು ತೆಗೆದುಕೊಳ್ಳುವ ವ್ಯವಹಾರವೇ ಹೊರತು ಬೇರೇನೂ ಅಲ್ಲ. ನಾವು ದೇವರಿಗೆ ಅರ್ಪಿಸಿದ್ದನ್ನು ಆತನು ಇಟ್ಟುಕೊಳ್ಳುವನೇ? ಅದೂ ಇಲ್ಲ. ಅದನ್ನೂ ನಾವೇ ಮರಳಿ ಪಡೆಯುವೆವು! ನಿಜವಾದ ಅರ್ಥದಲ್ಲಿ ಪ್ರಾರ್ಥನೆ ಎಂದರೆ ದೇವರೊಡನೆ ನಾವು ಸಂವಹನ ನಡೆಸುವುದೇ ಆಗಿದೆ. ನಮ್ಮೊಳಗಿನ ದೇವರನ್ನು ನಾವು ಕಾಣಲು ಸಾಧ್ಯವಾಗುವುದೇ ಅಂತಹ ಸಂವಹನದಿಂದ. ಶ್ರೀ ರಾಮಕೃಷ್ಣ ಪರಮಹಂಸರಿಗೆ ನಿತ್ಯವೂ ತಮ್ಮ ಕಾಳಿಕಾಮಾತೆಯೊಂದಿಗೆ ಈ ರೀತಿಯ ಸಂವಹನ ನಡೆಸಲು ಸಾಧ್ಯವಾಗಿತ್ತು. ಆ ದೇವಿಯೇ ತಮ್ಮ ಬಳಿ ಕುಳಿತು ಮಾತನಾಡಿದಳು ಎಂದು ಅವರು ತಮ್ಮ ಸಹಚರರಲ್ಲಿ ಅನುಯಾಯಿಗಳಲ್ಲಿ ಹೇಳುತ್ತಿದ್ದರು. ಪ್ರಾರ್ಥನೆ ಎನ್ನುವುದು ದೇವರೊಡನೆ ನಡೆಸುವ ಸಂವಾದವಾಗಬೇಕಿದ್ದರೆ ಎಲ್ಲದರಲ್ಲೂ ಇರುವ ಆ ಜಗನ್ನಿಯಾಮಕ ದೇವರನ್ನು ಕಾಣುವ ಒಳಗಣ್ಣನ್ನು ನಾವು ಹೊಂದಿರಬೇಕು.